ಚಿಕ್ಕಮಗಳೂರು :84 ವರ್ಷಗಳ ಇತಿಹಾಸದ ಕಡೂರು ತಾಲೂಕಿನ ಎಂ ಚೋಮನಹಳ್ಳಿ ಸರ್ಕಾರಿ ಶಾಲೆಗೆ 4 ವರ್ಷಗಳಿಂದ ಬೀಗ ಬಿದ್ದಿತ್ತು. ಆದರೆ, ಗ್ರಾಮಸ್ಥರು, ಯುವಕ ಸಂಘ ಹಾಗೂ ಸ್ನೇಹ ಸಿಂಚನ ಟ್ರಸ್ಟ್‌ನ ಸಾಂಘಿಕ ಪ್ರಯತ್ನದಿಂದ ಈ ಸರ್ಕಾರಿ ಶಾಲೆಯನ್ನು ಮತ್ತೆ ಆರಂಭಿಸಲಾಗಿದೆ. ಇದರಿಂದ ಶಿಕ್ಷಕರು, ಗ್ರಾಮಸ್ಥರು ಫುಲ್ ಖುಷಿಯಾಗಿದ್ದಾರೆ.
ಚಿಕ್ಕಮಗಳೂರು : 84 ವರ್ಷ ಇತಿಹಾಸದ ಮುಚ್ಚಿದ್ದ ಸರ್ಕಾರಿ ಶಾಲೆ ಪುನಾರಂಭ ; ಮನೆ ಮಾಡಿದ ಸಂಭ್ರಮ ಪೋಷಕರಿಗೆ ಇಂಗ್ಲಿಷ್ ಮೇಲಿನ ವ್ಯಾಮೋಹದಿಂದ ಕಾನ್ವೆಂಟ್ ಸ್ಕೂಲ್‌ಗಳಿಗೆ ಮಕ್ಕಳನ್ನು ಸೇರಿಸಿದ್ದರು. ಕ್ರಮೇಣ ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಿಂದ ಖಾಸಗಿ ಶಾಲೆಗಳಿಗೆ ಶಿಫ್ಟ್ ಆದ್ರು. ವಿದ್ಯಾರ್ಥಿಗಳ ಕೊರತೆ ಉಂಟಾಗಿ ಬೇರೆ ಮಾರ್ಗವಿಲ್ಲದೆ ಸರ್ಕಾರಿ ಶಾಲೆ ಮುಚ್ಚಲೇ ಬೇಕಾದ ಪರಿಸ್ಥಿತಿ ಉಂಟಾಗಿತ್ತು.
ಆ ಬಳಿಕ ಶಾಲೆ ವಿದ್ಯಾರ್ಥಿಗಳಿಲ್ಲದೇ ಪಾಳು ಬಿದ್ದು ಹೋಗಿತ್ತು. ಇನ್ನೇನು ಶಾಲೆ ಶಾಶ್ವತವಾಗಿ ಮುಚ್ಚಿತು ಎಂದುಕೊಳ್ಳುವಾಗ ಮ್ಯಾಜಿಕ್‌ವೊಂದು ನಡೆದು ಶಾಲೆ ಮತ್ತೆ ತನ್ನ ವೈಭವವನ್ನು ಪಡೆದಿದೆ. ಯಾವ ಕಾನ್ವೆಂಟ್ ಶಾಲೆಗಳಿಗೆ ವಿದ್ಯಾರ್ಥಿಗಳು ಹೋಗಿದ್ದರೋ ಅದೇ ಶಾಲೆಗಳಿಂದ ಪುಟಾಣಿಗಳು ಸರ್ಕಾರಿ ಶಾಲೆಗಳತ್ತ ಮುಖ ಮಾಡಿದ್ದಾರೆ.
ಕಾನ್ವೆಂಟ್ಗಿಂತ ಚೆನ್ನಾಗಿ ಸರ್ಕಾರಿ ಶಾಲೆಯ ತರಗತಿಯಲ್ಲಿ ಕುಳಿತು ಪುಟಾಣಿಗಳು ಪಾಠ ಕೇಳುತ್ತಿದ್ದಾರೆ. ತುಂಟಾಟ, ತರ್ಲೆ ಮಾಡಿಕೊಂಡು ತಮ್ಮ ಸ್ನೇಹಿತರೊಂದಿಗೆ ನಲಿಯುತ್ತಿದ್ದಾರೆ. ಮುಚ್ಚಿದ ಶಾಲೆ ಮತ್ತೆ ತೆರೆಯಲು ಸ್ವತಃ ಎಂ ಚೋಮನಹಳ್ಳಿ ಗ್ರಾಮಸ್ಥರು, ಬಸವೇಶ್ವರ ಯುವಕ ಸಂಘ, ಸ್ನೇಹ ಸಿಂಚನ ಟ್ರಸ್ಟ್ ಎಲ್ಲರ ಸಾಂಘಿಕ ಶ್ರಮವಿದೆ.
ಕಿರಿಯ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ಸದ್ಯ 15 ಮಕ್ಕಳು ದಾಖಲಾಗಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವಿದ್ಯಾರ್ಥಿಗಳು ಸೇರುವ ಸಾಧ್ಯತೆಯಿದೆ. ಶಾಲೆಯಲ್ಲಿ ಇಬ್ಬರು ಶಿಕ್ಷಕರಿದ್ದು, ಪುಟಾಣಿಗಳಿಗೆ ಉತ್ತಮ ರೀತಿಯಲ್ಲಿ ಶಿಕ್ಷಣ ಸಿಗುತ್ತಿದೆ.
ಪುಟಾಣಿಗಳ ಜ್ಞಾನರ್ಜನೆಗೆ ಅನುಕೂಲವಾಗುವಂತೆ ಶಾಲೆ ಗೋಡೆಗಳ ಮೇಲೆ ರಾಷ್ಟ್ರ ನಾಯಕರ ಚಿತ್ರ, ಪ್ರಾಣಿ-ಪಕ್ಷಿಗಳ ಚಿತ್ರ, ಅಕ್ಷರ ಮಾಲೆ, ಜ್ಞಾನಪೀಠ ಪುರಸ್ಕಾರ ಸಾಹಿತಿಗಳ ಚಿತ್ರ ಸೇರಿದಂತೆ ಪಠ್ಯಕ್ಕೆ ಸಂಬಂಧಿಸಿದ ಅನೇಕ ಚಿತ್ರಗಳನ್ನ ಬರೆಯಲಾಗಿದೆ. ಮರೆಯಾಗುತ್ತಿರುವ ಕನ್ನಡ ಶಾಲೆಗಳ ಮಧ್ಯೆ ಮುಚ್ಚಿದ್ದ ಎಂ ಚೋಮನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತೆ ಪುನಾರಂಭಗೊಂಡಿರುವುದು ಸ್ಥಳೀಯರ ಸಂಭ್ರಮಕ್ಕೆ ಕಾರಣವಾಗಿದೆ.