ಚಿಕ್ಕಮಗಳೂರು:ಪ್ರೀತಿಸಿ ಯುವಕನಿಂದ ಮೋಸ ಹಿನ್ನೆಲೆಯಲ್ಲಿ ನೊಂದ ಅಪ್ರಾಪ್ತೆಯೊಬ್ಬಳು ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಳಸ ತಾಲೂಕಿನ ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೋಗಿಕುಂಬ್ರಿ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕಿ ಕಳಸ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಳು.
ಈಕೆ ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್.ಕೆ ಮೇಗಲ್ ಗ್ರಾಮದ ನಿತೇಶ್ ಎಂಬುವನನ್ನು ಪ್ರೀತಿಸುತ್ತಿದ್ದಳಂತೆ. ಆತ ಮೋಸ ಮಾಡಿದ್ದಾನೆ ಎಂದು ಜ.10ರಂದು ಕಾಲೇಜಿನಿಂದ ಮನೆಗೆ ಬಂದು ಕಳೆನಾಶಕ ಸೇವಿಸಿದ್ದಾಳೆ. ವಿಷ ಸೇವಿಸಿದ ಬಳಿಕ ಮನೆಯಲ್ಲಿದ್ದ ಅಪ್ಪ-ಅಮ್ಮನಿಗೆ ವಿಷಯ ತಿಳಿಸಿದ್ದಾಳೆ. ಕೂಡಲೇ ಆಕೆಯನ್ನು ಕಳಸ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎ.ಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಡೆತ್‌ನೋಟ್ ಬರೆದ ಬಾಲಕಿ: ಆದರೆ, ನಾಲ್ಕು ದಿನಗಳ ಕಾಲ ಸಾವು-ಬದುಕಿನ ಮಧ್ಯೆ ಹೋರಾಡಿದ ಬಾಲಕಿ ಶನಿವಾರ ಸಂಜೆ ಸಾವನ್ನಪ್ಪಿದ್ದಾಳೆ. ಬಾಲಕಿಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಡೆತ್‌ನೋಟ್ ಬರೆದಿದ್ದು, ಅದರಲ್ಲಿ ಯುವಕ ನಿತೇಶ್ ಹೆಸರನ್ನು ಉಲ್ಲೇಖಿಸಿದ್ದಾಳೆ ಎಂದು ತಿಳಿದುಬಂದಿದೆ. ಅಪ್ರಾಪ್ತೆಯು ಡೆತ್‌ನೋಟ್ ಬರೆಯುತ್ತಿರುವ ಕ್ಷಣದ ವಿಡಿಯೋವನ್ನು ಮೊಬೈಲ್ನಲ್ಲಿ ಸೆರೆಹಿಡಿಯಲಾಗಿದೆ.