ಚಿಕ್ಕಮಗಳೂರು :ಜಿಲ್ಲೆಯಲ್ಲಿಮಳೆ ಅವಾಂತರ ಮುಂದುವರೆದಿದೆ. ಮಳೆಯ ಅಬ್ಬರಕ್ಕೆ ಕೆಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಚಿಕ್ಕಮಗಳೂರು ತಾಲೂಕಿನ ಕಾಮೇನಹಳ್ಳಿ ಗ್ರಾಮದಲ್ಲಿ ನಿನ್ನೆ ರಾತ್ರಿಯಿಂದಲೂ ರಸ್ತೆಯ ಮೇಲೆ ಹಳ್ಳದ ನೀರು ಉಕ್ಕಿ ಹರಿಯುತ್ತಿದೆ. ಮುಳ್ಳಯ್ಯನಗಿರಿ ಭಾಗದಲ್ಲಿ ಭಾರಿ ಮಳೆ ಹಿನ್ನೆಲೆ, ಹಳ್ಳದ ನೀರಿನ ಮಟ್ಟ ಕ್ಷಣಕ್ಷಣಕ್ಕೂ ಏರಿಕೆ ಆಗುತ್ತಿದೆ. ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ಇದರಿಂದಾಗಿ ಮಲ್ಲೇನಹಳ್ಳಿ, ಕಾಮೇನಹಳ್ಳಿ ಗ್ರಾಮಸ್ಥರು ಪರದಾಟ ನಡೆಸುತ್ತಿದ್ದಾರೆ.
ಕೊಪ್ಪ ತಾಲೂಕಿನ ಹೆರೂರು ಗ್ರಾಮದಲ್ಲಿ ಮಳೆಯ ಅಬ್ಬರಕ್ಕೆ ಸುಮಾರು 90 ಅಡಿ ಭೂ ಕುಸಿತ ಉಂಟಾಗಿರುವ ಘಟನೆಯೂ ನಡೆದಿದೆ. ಸುಮಾರು ಏಳಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕಿಸುವ ಮುಖ್ಯ ರಸ್ತೆ ಇದಾಗಿದ್ದು, ಶಾಂತಿ ಕೂಡಿಗೆ, ಶುಂಠಿ ಕೂಡಿಗೆ, ಬಿಟ್ಟ ಕೂಡಿಗೆ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಮಳೆ ಹೆಚ್ಚಾದಂತೆ ಸ್ವಲ್ಪ ಸ್ವಲ್ಪವೇ ಭೂಮಿ ಕುಸಿಯುತ್ತಿದೆ. ಇದೀಗ ಮತ್ತಷ್ಟು ರಸ್ತೆ ಕುಸಿಯುವ ಭೀತಿಯಲ್ಲಿ ಜನರು ಸಿಲುಕಿದ್ದಾರೆ. ಕೊಪ್ಪ ತಾಲೂಕಿನ ಹೆರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗ್ರಾಮಗಳು ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ. ಚಿಕ್ಕಮಗಳೂರು ತಾಲೂಕಿನ ಭಕ್ತರಹಳ್ಳಿ ಬೋವಿ ಕಾಲೋನಿಯಲ್ಲಿ ಗಾಳಿ ಮಳೆ ಆರ್ಭಟಕ್ಕೆ ಮನೆಯ ಮಾಳಿಗೆ ಹಾರಿ ಹೋಗಿರುವ ಘಟನೆ ನಡೆದಿದೆ. ಮನೆ ಸಂಪೂರ್ಣ ಜಖಂ ಆಗಿದೆ. ಅದೃಷ್ಟವಶಾತ್ ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗ್ರಾಮದ ದೊಡ್ಡಮುನಿ ಬೋವಿ ಎಂಬುವರಿಗೆ ಸೇರಿದ ಮನೆ ಇದಾಗಿದೆ ಎಂಬುದು ತಿಳಿದು ಬಂದಿದೆ.
ಫಾಲ್ಸ್ಗಳಿಗೆ ತೆರಳದಂತೆ ಜಿಲ್ಲಾಡಳಿತದಿಂದ ನಿರ್ಬಂಧ: ಮನೆಯಲ್ಲಿದ್ದ ಆಹಾರ ಪದಾರ್ಥ, ಪೀಠೋಪಕರಣಗಳಿಗೂ ಹಾನಿಯಾಗಿದೆ. ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಬಂದು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜಲಪಾತಗಳು ಮೈದುಂಬಿ ಹರಿಯುತ್ತಿದ್ದು, ಇವುಗಳನ್ನು ನೋಡಲು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ಜಿಲ್ಲಾಡಳಿತದಿಂದ ಮುಂಜಾಗ್ರತಾ ಕ್ರಮವಾಗಿ ಫಾಲ್ಸ್ಗಳಿಗೆ ನಿರ್ಬಂಧ ಹಾಕಲಾಗಿದೆ.