ಚಿಕ್ಕಮಗಳೂರು: ಜಿಲ್ಲೆಯಲ್ಲಿ ಶೌಚಾಲಯ ನಿರ್ಮಾಣ ಕಾಮಗಾರಿಯ ಆಡಳಿತಾತ್ಮಕ ಮಂಜೂರಾತಿ ಕಡತಕ್ಕೆ ಸಹಿ ಹಾಕಲು ಲಂಚ ಪಡೆಯುತ್ತಿದ್ದ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಹಾಗೂ ದ್ವಿತೀಯ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಡೆದಿದೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೆಸ್ಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಪು ನಗರ ನಿವಾಸಿ ಸಾಲುದ್ದೀನ್ ನೀಡಿದ ದೂರನ್ನು ಆಧರಿಸಿ, ದಾಳಿ ನಡೆಸಿದ ಅಧಿಕಾರಿಗಳು ಉಪ ನಿರ್ದೇಶಕ ರಂಗನಾಥಸ್ವಾಮಿ ಮತ್ತು ದ್ವಿತೀಯ ದರ್ಜೆ ಸಹಾಯಕ ಅಸ್ರಾರ್ ಅಹಮದ್ ಅವರನ್ನು ಬಂಧಿಸಿದ್ದಾರೆ.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೊಲ್ಲಿ ಬೈಲು ಮತ್ತು ಕಡೆ ಮಡಕಲ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 4.80 ಲಕ್ಷ ರೂ. ವೆಚ್ಚದಲ್ಲಿ ಶೌಚಾಲಯ ನಿರ್ಮಿಸಿದ್ದು ಅದಕ್ಕೆ ಆಡಳಿತಾತ್ಮಕ ಅನುಮೋದನೆ ಅಗತ್ಯವಿತ್ತು. ಅನುಮೋದನೆ ನೀಡುವಂತೆ ಡಿಡಿಪಿಐ ಅವರನ್ನು ಗುತ್ತಿಗೆದಾರರ ಮಗ ಭೇಟಿಯಾದಾಗ ಅವರು ದ್ವಿತೀಯ ಸಹಾಯಕ ಅಸ್ರಾರ್ ಅಹಮದ್ ಭೇಟಿಯಾಗಲು ತಿಳಿಸಿದ್ದರು. ಈ ವೇಳೆ 10,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಅಂತಿಮವಾಗಿ 4,000 ರೂ.ಗಳಿಗೆ ಒಪ್ಪಿಗೆಯಾಗಿತ್ತು. 1000 ರೂ. ಮುಂಗಡ ನೀಡಿ ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿತ್ತು.
ಉಳಿದ 3 ಸಾವಿರ ರೂ. ನೀಡುವ ಕುರಿತು ಡಿಡಿಪಿಐ ಅವರೊಂದಿಗೆ ನಡೆಸಿದ ಸಂಭಾಷಣೆಯನ್ನು ಮುದ್ರಿಸಿಕೊಂಡು ಲೋಕಾಯುಕ್ತಕ್ಕೆ ನೀಡಲಾಗಿತ್ತು. ಇಂದು ಉಳಿದ ಹಣ ನೀಡುವ ಸಂದರ್ಭದಲ್ಲಿ ಲೋಕಾಯುಕ್ತ ಡಿವೈಎಸ್ಪಿ ತಿರುಮಲೇಶ್ ನೇತೃತ್ವದಲ್ಲಿ ದಾಳಿ ನಡೆಸಿ ರಂಗನಾಥಸ್ವಾಮಿ ಮತ್ತು ಅಸ್ರಾರ್ ಅಹಮದ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಈ ಕಾರ್ಯಾಚರಣಯಲ್ಲಿ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ್, ಅನಿಲ್ ರಾಥೋಡ್, ಸಿಬ್ಬಂದಿ ವೇದಾವತಿ, ವಿಜಯ ಭಾಸ್ಕರ್, ಸಲ್ಮಾ ಬೇಗಮ್, ಅನಿಲ್ ನಾಯಕ್, ಪ್ರಸಾದ್, ರವಿ, ಮುಜಬ್ ಪಾಲ್ಗೊಂಡಿದ್ದರು.
ಶಿರಸಿಯಲ್ಲೂ ಇಂತಹದ್ದೆ ಘಟನೆ:ದೇವಸ್ಥಾನದ ಸಮಿತಿಗೆ ದಾನ ನೀಡಿದ ಜಾಗವನ್ನು ನೋಂದಣಿ ಮಾಡಲು ಲಂಚ ತೆಗೆದುಕೊಳ್ಳುತ್ತಿದ್ದ ಶಿರಸಿ ಸಬ್ ರಿಜಿಸ್ಟರ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿರುವ ಘಟನೆ ಇತ್ತೀಚೆಗ ನಡೆದಿತ್ತು. ಶಿರಸಿಯ ಸಬ್ ರಿಜಿಸ್ಟರ್ ರಾಧಮ್ಮ ಎಂಬುವವರು 3 ಸಾವಿರ ರೂ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾ ಬಲೆಗೆ ಬಿದ್ದಿದ್ದರು. ಶಿರಸಿ ತಾಲೂಕಿನ ದಾಸನಕೊಪ್ಪದ ಬಸವರಾಜ ನಂದಿಕೇಶ್ವರಮಠ ಎಂಬವರು ತಮ್ಮ ಜಾಗವನ್ನು ಜಗಜ್ಯೋತಿ ವೀರಶೈವ ಸಮಿತಿಗೆ ದಾನವಾಗಿ ನೀಡಿದ್ದರು. ಇದನ್ನು ನೋಂದಣಿ ಮಾಡಲು ಉಪ ನೋಂದಣಾಧಿಕಾರಿ ಲಂಚ ಕೇಳಿದ್ದು, ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಅದರಂತೆ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು
ಇದನ್ನೂ ಓದಿ:17 ಸರ್ಕಾರಿ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ: ₹35 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ