ಚಿಕ್ಕಮಗಳೂರು: ಅವರಿಬ್ಬರು ಶಾಲಾ ದಿನಗಳಿಂದ ಪರಸ್ಪರ ಇಷ್ಟಪಟ್ಟವರು. ಅಲ್ಲದೇ ಬರೋಬ್ಬರಿ 10 ವರ್ಷಗಳ ಕಾಲ ಪ್ರೀತಿಸಿದ ಬಳಿಕ ತಮ್ಮ ಸಂಬಂಧಕ್ಕೆ ಮದುವೆ ಅಧಿಕೃತ ಮುದ್ರೆ ಒತ್ತಲು ರೆಡಿಯಾಗಿದ್ದರು. ಆದರೆ, ಹುಡುಗಿಯ ಕುಟುಂಬ ಮಾತ್ರ ಮದುವೆಗೆ ಒಪ್ಪಿರಲಿಲ್ಲ. ಕುಟುಂಬಸ್ಥರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾದ ಜೋಡಿಗೆ ಇದೀಗ ಜೀವ ಭಯ ಶುರುವಾಗಿದೆ. ಹಾಗಾಗಿ ನವದಂಪತಿ ಭದ್ರತೆ ನೀಡುವಂತೆ ಕೋರಿ ಚಿಕ್ಕಮಗಳೂರು ಎಸ್‍ಪಿ ಕಚೇರಿ ಮೆಟ್ಟಿಲು ಏರಿದ್ದಾರೆ.
ಶಾಲಾ ಹಂತದಿಂದಲೇ ಅರಳಿದ ಪ್ರೀತಿ:ನವದಂಪತಿ ಹೇಮಂತ್ ಹಾಗೂ ಅನನ್ಯ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ನಿವಾಸಿಗಳು. ಮಲ್ಲೇನಹಳ್ಳಿ ಗ್ರಾಮದ ಹೇಮಂತ್ ಮತ್ತು ಲಕ್ಷ್ಮಿಸಾಗರ ಗ್ರಾಮದ ಅನನ್ಯ ತರೀಕೆರೆ ಪಟ್ಟಣದಲ್ಲಿ ಶಾಲೆಯಲ್ಲಿ ಓದುತ್ತಿರುವಾಗಲೇ ಪರಸ್ಪರ ಪ್ರೀತಿಸಿದ್ದರು. ಶಾಲಾ ದಿನಗಳಲ್ಲಿ ಹೇಮಂತ್ ಮತ್ತು ಅನನ್ಯಳ ನಡುವೆ ಆರಂಭವಾಗಿದ್ದ ಪ್ರೇಮ ಮದ್ವೆಯಾಗುವ ಕನಸು ಮೂಡಿಸಿತ್ತು. ಪರಸ್ಪರ ಪ್ರೀತಿಸುತ್ತಿರುವ ವಿಚಾರವನ್ನು ಪೋಷಕರಿಗೂ ತಿಳಿಸಿದ್ದರು. ಆದರೆ, ಅನನ್ಯ ಪೋಷಕರು ಮಾತ್ರ ಮದುವೆಗೆ ನಿರಾಕರಿಸಿದರು.
ಎರಡೆರಡು ಬಾರಿ ಹಸೆಮಣೆ ಏರಿದ ಜೋಡಿ: ಹೆತ್ತವರ ವಿರೋಧದ ನಡುವೆಯೂ ಅನನ್ಯ ಹಾಗೂ ಹೇಮಂತ್ ಸ್ನೇಹಿತರ ಸಮ್ಮುಖದಲ್ಲಿ ದೇವಾಲಯದಲ್ಲಿ ಹಸೆಮಣೆ ಏರಿದ್ದರು. ವಿಷಯ ತಿಳಿದ ಅನನ್ಯ ಪೋಷಕರು ನಾವೇ ಮದುವೆ ಮಾಡುತ್ತೇವೆ ಎಂದು ಕರೆಸಿಕೊಂಡಿದ್ದರು. ಖುಷಿಯಾಗಿ ಬರ್ತಿದ್ದ ದಂಪತಿಗೆ ರಸ್ತೆ ಮಧ್ಯೆಯೇ ಅಡ್ಡಗಟ್ಟಿ ಹೇಮಂತ್‌ಗೆ ಹೊಡೆದು ಮಗಳನ್ನ ಕರೆದುಕೊಂಡು ಹೋಗಿದ್ದರು. ಮೂರು ತಿಂಗಳು ಸುಮ್ಮನಿದ್ದ ಅನನ್ಯ ಮತ್ತೆ ಮನೆ ಬಿಟ್ಟು ಬಂದು ಮತ್ತೊಮ್ಮೆ ಹೇಮಂತ್ ಜೊತೆ ಮದುವೆಯಾಗಿದ್ದಾರೆ. ಮೂರು ತಿಂಗಳ ಅವಧಿಯಲ್ಲಿ ಈ ಜೋಡಿ ಎರಡೆರಡು ಬಾರಿ ಹಸೆಮಣೆ ಏರಿದ್ದಾರೆ.
ಬದುಕಲು ಬಿಡಿ - ಹೆತ್ತವರಿಗೆ ಮನವಿಮನೆಯವರಿಂದ ಆಪತ್ತು ಕಾದಿಗೆ ಎಂಬುದು ಗೊತ್ತಾದ ಜೋಡಿ, ತಮ್ಮನ್ನು ರಕ್ಷಣೆ ಮಾಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ. ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿಗೆ ಪ್ರೇಮಿಗಳು ಆಗಮಿಸಿ "ತಾವು ಇಬ್ಬರೂ ವಯಸ್ಕರಾಗಿದ್ದು, ಒಪ್ಪಿಕೊಂಡು ಮದುವೆಯಾಗಿದ್ದೇವೆ. ತಮಗೆ ಪೋಷಕರಿಂದ ಜೀವಭಯವಿದ್ದು ರಕ್ಷಣೆ ಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಈಗ ನಮ್ಮ ಪಾಡಿಗೆ ನಮ್ಮ ಬಿಡಿ. ನಾವು ಬದುಕುತ್ತೇವೆ ಎಂದು ಹೆತ್ತವರಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ.