ಚಿಕ್ಕಮಗಳೂರು: ಬೇಟೆಗಾರರು ಹಾಕಿದ ಉರುಳಿಗೆ ಸಿಲುಕಿದ ಚಿರತೆಯೊಂದು ಇಡೀ ರಾತ್ರಿ ಸಾವು-ಬದುಕಿನ ಮಧ್ಯೆ ಹೋರಾಡಿ ಸ್ಥಳದಲ್ಲಿಯೇ ಪ್ರಾಣ ಬಿಟ್ಟ ಘಟನೆ ಜಿಲ್ಲೆಯಲ್ಲಿ ಜರುಗಿದೆ.
ತಾಲೂಕಿನ ನೇರಡಿ ಗ್ರಾಮದಲ್ಲಿ ನಿನ್ನೆ ರಾತ್ರಿ ಬೇಟೆಗಾರರು ಹಾಕಿದ್ದ ಉರುಳಿಗೆ ಐದು ವರ್ಷದ ಗಂಡು ಚಿರತೆ ಸಿಲುಕಿತ್ತು. ಸುಮಾರು 10 ಗಂಟೆಗಳ ಬದುಕಿಗಾಗಿ ಹೋರಾಡಿದ ಚಿರತೆ ಕೊನೆಗೆ ಸಾವಿಗೆ ಶರಣಾಯಿತು.
ಬೇಟೆಗಾರರ ಉರುಳಿಗೆ ಸಿಲುಕಿ ಚಿರತೆ ಸಾವು ಚಿರತೆಯ ಗೋಳಾಟವನ್ನು ಕಂಡ ಸ್ಥಳಿಯರು ಬೆಳಗ್ಗೆ 7.30ಕ್ಕೆ ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. 9.30ರ ಸುಮಾರಿಗೆ ಸ್ಥಳಕ್ಕೆ ಬಂದ ಅಧಿಕಾರಿಗಳು ಅರಿವಳಿಕೆ ಮದ್ದು ನೀಡುವ ವೈದ್ಯರಿರಲಿಲ್ಲದೆ ಕೈಕಟ್ಟಿ ನಿಂತಿದ್ದರು. ಕೊನೆ ಘಳಿಗೆವರೆಗೂ ಹೋರಾಡಿದ ಚಿರತೆ ಕೊನೆಗೆ ನೋವು ತಾಳಲಾರದೆ ಸಾವನ್ನಪ್ಪಿತ್ತು.
ಅರಿವಳಿಕೆ ಮದ್ದು ಹಾಗೂ ತಜ್ಞರ ಕೊರತೆ
ಜಿಲ್ಲೆಯಲ್ಲಿ ಅರವಳಿಕೆ ಮದ್ದು ಹಾಗೂ ತಜ್ಞರಿಲ್ಲದೆ ಕಾಡು ಪ್ರಾಣಿಗಳು ಸಾವನ್ನಪ್ಪಿರೋದಕ್ಕೆ ಕಾಫಿನಾಡಲ್ಲಿ ಸಾಕಷ್ಟು ಉದಾಹರಣೆಗಳಿವೆ. ಆದರೂ ಕೂಡ ಸರ್ಕಾರ ಚಿಕ್ಕಮಗಳೂರು ಅರಣ್ಯ ಇಲಾಖೆಗೆ ಬೇಕಾದ ಸೌಲಭ್ಯ ಕಲ್ಪಿಸೋ ಮನಸ್ಸು ಮಾಡುತ್ತಿಲ್ಲ. ಕಾಡುಹಂದಿ, ಜಿಂಕೆ, ಸಾರಂಗ, ಮೊಲದಂತಹ ಪ್ರಾಣಿಗಳಿಗೆ ಉರುಳು ಇಡುವುದು ಜಿಲ್ಲೆಯಲ್ಲಿ ಸಾಮಾನ್ಯವಾಗಿದೆ. ಈ ಕೂಡಲೇ ಅಧಿಕಾರಿಗಳು ಪ್ರಾಣಿ ಬೇಟೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಪ್ರಾಣಿಪ್ರಿಯರ ಒತ್ತಾಯ.