ಚಿಕ್ಕಮಗಳೂರು: ಕಳೆದ ವರ್ಷ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಸಾಕಷ್ಟು ಭೂ ಕುಸಿತ ಉಂಟಾಗಿತ್ತು. ಪರಿಣಾಮ ಮಲೆನಾಡಿಗರ ಬದುಕು ತತ್ತರಿಸಿಹೋಗಿತ್ತು.ಅಲ್ಲದೇ ಈ ಸಂದರ್ಭದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿ ನಿಂತು ಸಂತ್ರಸ್ತರ ಸಮಸ್ಯೆಗಳನ್ನು ಪರಿಹರಿಸಬೇಕಿದ್ದ ಸರ್ಕಾರ ಮಾತ್ರ ಮೌನ ವಹಿಸಿತ್ತು. ಹೀಗಾಗಿ ಇದರಿಂದ ಬೇಸತ್ತ ಜಿಲ್ಲಾ ಅರಣ್ಯ ಇಲಾಖೆ ಇವೆಲ್ಲಾ ಸಮಸ್ಯೆಯ ಪರಿಹಾರೋಪಾಯವಾಗಿ ಇದೀಗ ಹೊಸದೊಂದು ಮಾರ್ಗವನ್ನು ಕಂಡುಕೊಂಡಿದೆ.
ಹೌದು, ಮಲೆನಾಡಿನಲ್ಲಿ ಮಳೆ ಅಂದ್ರೆ ಅದು ಸರ್ವೇಸಾಮಾನ್ಯ, ಆದರೂ ಕಳೆದ ವರ್ಷದಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ವರುಣ ಹಲವಾರು ಅನಾಹುತಗಳನ್ನು ತಂದೊಡ್ಡಿದ್ದಾನೆ. ಇದಕ್ಕೆ ಉದಾಹರಣೆಯೆಂಬಂತೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ ಕುಸಿತವನ್ನು ನಾವು ಪರಿಗಣಿಸಬಹುದು. ಅಲ್ಲದೇ ಇಷ್ಟೊಂದು ಭೂ ಕುಸಿತಕ್ಕೆ ಕಾರಣವನ್ನು ಕಂಡುಕೊಂಡಾಗ ಮೊದಲಿಗೆ ತಿಳಿದುಬಂದಿದ್ದು ಭೂಮಿಯ ಮೇಲ್ಪದರದ ಸವಕಳಿ. ಇದಕ್ಕೆ ಕಾರಣ ದುರ್ಬಲವಾದ ಹುಲ್ಲುಗಾವಲು. ಹೀಗಾಗಿ ಈ ಸಮಸ್ಯೆಯ ಪರಿಹಾರೋಪಾಯವಾಗಿ ಅರಣ್ಯ ಇಲಾಖೆ ಕಳೆದ ವರ್ಷ ಭಾರೀ ಮಳೆಯಿಂದ ಚಾರ್ಮಾಡಿಯಲ್ಲಿ ಭೂಕುಸಿತ ಉಂಟಾಗಿದ್ದ ಜಾಗದಲ್ಲಿ ಲಾವಂಚ ಹುಲ್ಲನ್ನ ನೆಡಲು ಮುಂದಾಗಿದ್ದಾರೆ.
ಏನಿದು ಲಾವಂಚ?: ಲಾವಂಚ ಅಂದ್ರೆ ಇದೊಂದು ಹುಲ್ಲು ಜಾತಿಗೆ ಸೇರಿದ ಸಸ್ಯ. ಈ ಸಸ್ಯಕ್ಕೆ ಅದೆಂತಹ ಮಳೆರಾಯನಿಗೂ ಸೆಡ್ಡು ಹೊಡೆದು ಭೂ ಭಾಗದ ಮೇಲ್ಪದರವನ್ನು ರಕ್ಷಿಸುವ ಶಕ್ತಿಯಿದೆ. ಸುಮಾರು ಒಂದೂವರೆಯಿಂದ ಎರಡು ಅಡಿಗಳಷ್ಟು ಎತ್ತರವಾಗಿ ಬೆಳೆಯುವ ಈ ಹುಲ್ಲು ಸಾಧಾರಣ ತೇವಾಂಶ ಹಾಗೂ ಉಷ್ಣಾಂಶ ಇರುವ ಪ್ರದೇಶಗಳಲ್ಲಿ ಹುಲುಸಾಗಿ ಜೊಂಡಿನಂತೆ ಹರಡುತ್ತದೆ. ಭೂಮಿಯೊಳಗೆ ಅರ್ಧ ಅಡಿಯಷ್ಟು ಆಳಕ್ಕೆ ಹೋಗುವುದರ ಜೊತೆಗೆ ಸುಮಾರು ನಾಲ್ಕೈದು ಅಡಿ ಅಗಲ ವಿಸ್ತರಿಸಿಕೊಳ್ಳುತ್ತೆ. ಸಣ್ಣ-ಸಣ್ಣದಾಗಿ ಹರಡಿಕೊಳ್ಳುವ ಇದರ ಬೇರುಗಳು ಮಣ್ಣನ್ನ ಗಟ್ಟಿ ಹಿಡಿದುಕೊಳ್ಳುತ್ತೆ. ಆ ಮೂಲಕ ಮಳೆಗಾಲದಲ್ಲಿ ಸಂಭವಿಸಬಹುದಾದ ಮಣ್ಣಿನ ಸವಕಳಿಯನ್ನು ತಡೆಯುವ ಕೆಲಸವನ್ನು ಮಾಡುತ್ತದೆ.