ಚಿಕ್ಕಮಗಳೂರು:ಜಿಲ್ಲೆಯಲ್ಲಿ ಮಳೆ ಅಬ್ಬರ ಕಡಿಮೆಯಾಗಿದ್ದರೂ ಅನಾಹುತಗಳು ನಿಂತಿಲ್ಲ. ತರೀಕೆರೆ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಕೆಮ್ಮಣ್ಣು ಗುಂಡಿ ಬಳಿ ಸುಮಾರು 20 ಮೀಟರ್ ಕಾಂಕ್ರೀಟ್ ರಸ್ತೆ ಕುಸಿದಿದೆ. ಕಲ್ಲತ್ತಿಗರಿಯಿಂದ ಕೆಮ್ಮಣ್ಣುಗುಂಡಿಗೆ ಸಂಪರ್ಕ ಕಲ್ಪಿಸುವ ಮಾರ್ಗದ ಸಿಮೆಂಟ್ ರಸ್ತೆ ಬಿರುಕು ಬಿಟ್ಟಿದ್ದು ಸುಮಾರು 2 ಅಡಿಯಷ್ಟು ಕುಸಿದಿದೆ. ಈ ಮಾರ್ಗದಲ್ಲಿ ಸಂಚರಿಸಲಾಗದೆ ಕೆಲ ಪ್ರವಾಸಿಗರು ವಾಪಸ್ ಆಗಿದ್ದಾರೆ.
ಬಿರುಕು ಬಿಟ್ಟಿರುವ ಈ ರಸ್ತೆ ಸಂಪೂರ್ಣ ಕುಸಿದರೆ ಕೆಮ್ಮಣ್ಣು ಗುಂಡಿ ಹಾಗೂ ಹೆಬ್ಬೆ ಜಲಪಾತಕ್ಕೆ ಹೋಗುವ ಪರ್ಯಾಯ ಮಾರ್ಗವೂ ಇಲ್ಲದೆ ಸ್ಥಳೀಯರು ಹಾಗೂ ಪ್ರವಾಸಿಗರಿಗೆ ತೀವ್ರ ತೊಂದರೆಯಾಗಲಿದೆ. ಸ್ಥಳಕ್ಕೆ ಭೇಟಿ ನೀಡಿರುವ ಅಧಿಕಾರಿಗಳು 20 ಅಡಿ ಅಗಲದ ರಸ್ತೆಯಲ್ಲಿ ರಸ್ತೆ ಕುಸಿದಿರುವ ಜಾಗಕ್ಕೆ 10 ಅಡಿ ಅಗಲದ ರೇಡ್ ಟೇಪ್ ಕಟ್ಟಿ ಕೇವಲ 10 ಅಡಿ ಜಾಗದಲ್ಲೇ ವಾಹನಗಳು ಸಂಚರಿಸುವಂತೆ ಸೂಚನೆ ನೀಡಿದ್ದಾರೆ.