ಚಿಕ್ಕಮಗಳೂರು :ತಾಲೂಕಿನ ಮುತ್ತೋಡಿ ಅರಣ್ಯ ವಲಯದಲ್ಲಿ ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ರಸ್ತೆ ಪಕ್ಕದ ಗುಡ್ಡವೊಂದು ಕುಸಿದಿದೆ. ಪರಿಣಾಮ ಅರಣ್ಯ ವಲಯದ ಹತ್ತಾರು ಹಳ್ಳಿಗಳ ಜನರು ಸುಮಾರು 30 ಕಿ.ಮೀ. ಸುತ್ತುವರೆದು ಸಂಚರಿಸಬೇಕಾದ ಪರಿಸ್ಥಿತಿ ಬಂದೊದಗಿದೆ.
ಧಾರಾಕಾರ ಮಳೆಯಿಂದ ಗುಡ್ಡ ಕುಸಿತ ಮಲೆನಾಡಲ್ಲಿ ಮಳೆ ಸಂಪೂರ್ಣ ಕ್ಷೀಣಿಸಿದೆ. ಮಲೆನಾಡು ಭಾಗಗಳಾದ ಮೂಡಿಗೆರೆ, ಎನ್.ಆರ್.ಪುರ, ಶೃಂಗೇರಿ, ಬಾಳೆಹೊನ್ನೂರು, ಕಳಸ ಹಾಗೂ ಕೊಪ್ಪ ಭಾಗದಲ್ಲಿ ಮಳೆ ಕುಂಠಿತಗೊಂಡರೂ ಅಲ್ಲಲ್ಲಿ ಸ್ವಲ್ಪ ಸುರಿಯತೊಡಗಿದೆ. ಆದರೆ, ಕಳೆದ ರಾತ್ರಿ ಸುರಿದ ಮಳೆಯಿಂದ ಮುತ್ತೋಡಿ ಅರಣ್ಯ ವಲಯದ ಮುತ್ತೋಡಿ-ಹೊನ್ನಾಳ ಅರಣ್ಯ ಇಲಾಖೆಯ ಚೆಕ್ಪೋಸ್ಟ್ ಸಮೀಪ ಗುಡ್ಡ ಕುಸಿದಿದ್ದು ಹಳ್ಳಿಗರು 30 ಕಿ.ಮೀ. ಸುತ್ತಿಕೊಂಡು ಓಡಾಡುವಂತಾಗಿದೆ.
ಶಿರವಾಸೆ, ಗಾಳಿಗುಡ್ಡೆ, ಹೊನ್ನಾಳ ಸೇರಿದಂತೆ ಮುತ್ತೋಡಿ ಅರಣ್ಯ ವಲಯದ ಹತ್ತಾರು ಹಳ್ಳಿಯ ಜನ ಕೊಳಗಾಮೆ ಮಾರ್ಗವಾಗಿ ಕೈಮರಕ್ಕೆ ಬಂದು ಚಿಕ್ಕಮಗಳೂರು ನಗರಕ್ಕೆ ಭೇಟಿ ನೀಡುತ್ತಿದ್ದಾರೆ. ಇನ್ನು ಕಳೆದ ರಾತ್ರಿ ಬಯಲುಸೀಮೆ ಭಾಗವಾದ ತರೀಕೆರೆ ಹಾಗೂ ಅಜ್ಜಂಪುರದಲ್ಲಿ ಭಾರಿ ಮಳೆಯಾಗಿದೆ.
ಬೀರೂರಿನಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದರೆ, ಅಜ್ಜಂಪುರ ತಾಲೂಕಿನ ಶಿವನಿ ಕೆರೆ ತುಂಬಿದ ಪರಿಣಾಮ ಈರುಳ್ಳಿ ಹೊಲಗಳು ಸಂಪೂರ್ಣ ಜಲಾವೃತಗೊಂಡಿವೆ. ಕಳೆದ ವರ್ಷ ಕೂಡ ಅಜ್ಜಂಪುರದಲ್ಲಿ ಧಾರಾಕಾರ ಮಳೆ ಸುರಿದಿತ್ತು. ಆಗ ಒಂದು ಹೊಲದ ಈರುಳ್ಳಿ ಮತ್ತೊಂದು ಹೊಲಕ್ಕೆ ಹೋಗಿ ನಿಂತಿತ್ತು. ಈ ವರ್ಷ ಕೂಡ ಭಾರಿ ಮಳೆಯಿಂದ ಬಯಲುಸೀಮೆ ಭಾಗದ ಬಹುತೇಕ ಬೆಳೆಗಳು ವರುಣದೇವನಿಗೆ ಆಹುತಿಯಾಗಿವೆ.
ಧಾರಾಕಾರ ಮಳೆಯಿಂದ ಗುಡ್ಡ ಕುಸಿತ ಭಾರಿ ಮಳೆಯಿಂದ ಬಯಲುಸೀಮೆ ಭಾಗದಲ್ಲಿ ಬಹುತೇಕ ಬೆಳೆಗಳು ನೀರುಪಾಲಾಗಿವೆ. ಕಳೆದ ವರ್ಷವೂ ಹೀಗೆ ಆಗಿತ್ತು, ಈ ವರ್ಷವೂ ಹೀಗೆ ಆಯಿತು ಎಂದು ಜಿಲ್ಲೆಯ ಬಯಲುಸೀಮೆ ಭಾಗದ ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.