ಕೆಟ್ಟದ್ದನ್ನ ನೋಡಲ್ಲ, ಕೇಳಲ್ಲ, ಮಾತಾಡಲ್ಲ - ಲಕ್ಷ್ಮಿ ಹೆಬ್ಬಾಳ್ಕರ್ ಶಪಥ ಚಿಕ್ಕಮಗಳೂರು:ಮೂರು ತಿಂಗಳು ಕೆಟ್ಟದ್ದನ್ನ ನೋಡಲ್ಲ, ಕೇಳಲ್ಲ, ಮಾತಾಡಲ್ಲ. ಈ ಬಾರಿ ಬಹಳ ತಾಳ್ಮೆಯಿಂದ ಎಲೆಕ್ಷನ್ ಮಾಡ್ಬೇಕು ಅನ್ಕೊಂಡಿದ್ದೀನಿ. ಸಿಡಿ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆ ನೀಡಲ್ಲ, ಮಾಧ್ಯಮದವರಿಗೆ ವಿನಂತಿ ಕೂಡ ಮಾಡಿದ್ದೇನೆ. ಮೂರು ತಿಂಗಳು ತಾಳ್ಮೆಯಿಂದ ನಾನು ಮಾಡಿದ ಕೆಲಸದಿಂದ ಗೆಲ್ಲಬೇಕಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರವನ್ನು ಅಧಿಕಾರಕ್ಕೆ ತರಬೇಕಿದೆ. ಮಹಿಳೆಯರ ಪರವಾದ ಸರ್ಕಾರವನ್ನು ನಾವು ರೂಪಿಸ ಬೇಕಿದೆ. ನಾನು ತುಂಬಾ ತಾಳ್ಮೆಯಿಂದ ಇರಲು ಬಯಸುತ್ತೇನೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಹಾಂದಿ ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯರಿಗಾಗಿ ನಯನ ಮೋಟಮ್ಮ ಆಶಾ ಕಿರಣ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಈ ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪಾಲ್ಗೊಂಡಿದ್ದರು. ಈ ವೇಳೆ ನೂರಾರು ಆಶಾ ಕಾರ್ಯಕರ್ತೆಯರಿಗೆ ಬಾಗಿನ ನೀಡಿ ಗೌರವಿಸಿದರು. ಕಾರ್ಯಕ್ರಮದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕೆಟ್ಟದ್ದನ್ನ ನೋಡಲ್ಲ, ಕೇಳಲ್ಲ, ಮಾತಾಡಲ್ಲ ಎಂಬ ಶಪಥ ಮಾಡಿದರು.
ಇತ್ತೀಚೆಗೆ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸಿಡಿ ವಿಚಾರವಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮೇಲೆ ಆರೋಪ ಮಾಡಿದ್ದರು. ಅಲ್ಲದೇ ದೆಹಲಿಗೆ ಪ್ರಯಾಣ ಮಾಡಿರುವ ಸಾಹುಕಾರ್ ಅಮಿತ್ ಶಾರನ್ನು ಭೇಟಿ ಮಾಡಿ ಸಿಡಿ ಬಗ್ಗೆ ತನಿಖೆಗೆ ಒತ್ತಾಯಿಸಿದ್ದರು. ಈ ವಿಚಾರವಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಕೇಳಿದರೆ,' ಈ ಬಾರಿ ಬಹಳ ತಾಳ್ಮೆಯಿಂದ ಚುನಾವಣೆಯನ್ನು ಎದುರಿಸಬೇಕು ಎಂದು ಕೊಂಡಿದ್ದೇನೆ. ಮುಂದಿನ ಮೂರು ತಿಂಗಳು ಕೆಟ್ಟದ್ದನ್ನು ನೋಡಲ್ಲ, ಕೆಟ್ಟದ್ದನ್ನು ಕೇಳಲ್ಲ, ಕೆಟ್ಟದ್ದನ್ನು ಮಾತನಾಡಲ್ಲ ಎಂದು ಪ್ರತಿಕ್ರಿಯಿಸಿದರು.
ರಾಜಕಾರಣದಲ್ಲಿ ಮಹಿಳೆಯರಿಗೆ ಬಹಳ ಕಷ್ಟ. ಹಂತ ಹಂತದಲ್ಲೂ ನಾವು ಅಗ್ನಿ ಪರೀಕ್ಷೆ ಎದುರಿಸಬೇಕು. ಆ ಸೀತಾ ಮಾತೆ ಕೂಡ ಅಗ್ನಿ ಪರೀಕ್ಷೆಯಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಇನ್ನು ಲಕ್ಷ್ಮಿ ಹೆಬ್ಬಾಳ್ಕರ್ ಯಾವ ಲೆಕ್ಕ ಎಂದು ಹೇಳಿದ ಅವರು ಸಿ.ಡಿ. ಬಾಂಬ್ ಪ್ರಕರಣದಿಂದ ಹೆಣ್ಣಿನ ಸಂಘರ್ಷದ ಬದುಕನ್ನು ಹೊರ ಎಳೆದು ತಂದಿದ್ದಾರೆ ಎಂದು ಹೇಳಿದರು.
ಹೆಚ್ಡಿ ಕುಮಾರಸ್ವಾಮಿ ದಾಸಹಳ್ಳಿಯ ಪಂಚರತ್ನ ಯಾತ್ರೆ ವೇಳೆ ಪ್ರಹ್ಲಾದ್ ಜೋಶಿ ಅವರನ್ನು ಸಿಎಂ ಮಾಡಿ, 8 ಮಂದಿ ಉಪಮುಖ್ಯಮಂತ್ರಿ ಮಾಡುವ ಪ್ಲಾನ್ ಬಗ್ಗೆ ಆರ್ಎಸ್ಎಸ್ ದೆಹಲಿ ಕಚೇರಿಯಲ್ಲಿ ಚರ್ಚೆ ನಡೆದಿದೆ ಎಂದಿದ್ದರು. ಅಲ್ಲದೇ ಪ್ರಹ್ಲಾದ್ ಜೋಶಿ ಶೃಂಗೇರಿ ಮಠ ಧ್ವಂಸ ಮಾಡಿದ ದೇಶಸ್ಥ ಬ್ರಾಹ್ಮಣ ವರ್ಗಕ್ಕೆ ಸೇರಿದವರು ದೂರಿದ್ದರು. ಈ ಬಗ್ಗೆ ಮಾಧ್ಯಮದವರು ಕೇಳಿದ್ದಕ್ಕೆ, ಕುಮಾರಸ್ವಾಮಿ ಹೇಳಿಕೆ ಬಗ್ಗೆ ನಾನು ನೋಡಿಲ್ಲ. ಕುಮಾರಸ್ವಾಮಿ ಅಣ್ಣನ ಬಗ್ಗೆ ತುಂಬಾ ಗೌರವ ಇದೆ. ಅವರು ಯಾವ ಮೂಲದಿಂದ ಹೇಳಿದ್ದಾರೋ ಗೊತ್ತಿಲ್ಲ, ಅದಕ್ಕೆ ನಾನು ಪ್ರತಿಕ್ರಿಯೆ ನೀಡೋದು ಸರಿಯಲ್ಲ ಎಂದು ಹೇಳಿದರು.
ವೇದಿಕೆ ಭಾಷಣದ ವೇಳೆ ಭಾವುಕರಾಗಿ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ಮಹಿಳೆ ಅಂದರೆ ಸಂಘರ್ಷ, ಅದು ಮಹಿಳೆ ಹುಟ್ಟಿನಿಂದಲೇ ಜೊತೆಯಾಗಿ ಬರುತ್ತೆ. ಹುಟ್ಟಿನಿಂದ ಸಾಯುವವರೆಗೂ ಪರೀಕ್ಷೆಗಳನ್ನು ಎದುರಿಸುತ್ತಲೇ ಇರಬೇಕು. ಎಲ್ಲದನ್ನೂ ಹೊತ್ತುಕೊಂಡು ಇರಬೇಕು, ಎದುರಿಸಬೇಕು ಮತ್ತು ಗೆಲ್ಲಬೇಕು. ಈಗ ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯರು ಮುಂದಿದ್ದಾರೆ. ಮೊದಲು ಭಾರತದಲ್ಲಿ ಮಹಿಳೆಯರಿಗೆ ಹಲವಾರು ನಿರ್ಬಂಧಗಳಿದ್ದವು. ಅದನ್ನೆಲ್ಲಾ ಮೀರಿ ಹಲವಾರು ಮಹಿಳೆಯರು ಸಾಧನೆ ಮಾಡಿದ್ದಾರೆ ಎಂದರು.
ಇದನ್ನೂ ಓದಿ:ಪ್ರಹ್ಲಾದ್ ಜೋಶಿ ನಮ್ಮ ಬ್ರಾಹ್ಮಣರಲ್ಲ, ಅವರನ್ನು ಮುಂದಿನ ಸಿಎಂ ಮಾಡಲು ಆರ್ಎಸ್ಎಸ್ ನಿರ್ಧರಿಸಿದೆ: ಹೆಚ್ಡಿಕೆ