ಚಿಕ್ಕಮಗಳೂರು: ಮಲೆನಾಡು ಎಂದರೆ ಹೊರ ಭಾಗದ ಜನರಿಗೆ ಎಲ್ಲಿಲ್ಲದ ಖುಷಿ. ಇಲ್ಲಿನ ಹಚ್ಚ- ಹಸಿರು, ಧುಮ್ಮಿಕ್ಕಿ ಹರಿಯುವ ಜಲಪಾತಗಳು, ಹಳ್ಳ ತೊರೆಗಳು, ಪ್ರಕೃತಿಯ ಸೊಬಗು..ಇವಕ್ಕೆಲ್ಲ ಮನ ಸೋಲದವರಿಲ್ಲ. ಆದರೆ, ಇಲ್ಲಿರುವ ಜನರು ಮೂಲಭೂತ ಸೌಕರ್ಯಗಳಿಲ್ಲದೇ ನರಕಯಾತನೆ ಅನುಭವಿಸುತ್ತಿದ್ದಾರೆ. ಮಲೆನಾಡು ಭಾಗದ ಅದೆಷ್ಟೋ ಗ್ರಾಮಗಳಿಗೆ ಇಂದಿಗೂ ಕೂಡ ಸರಿಯಾದ ರಸ್ತೆ ವ್ಯವಸ್ಥೆ ಹಾಗೂ ಸೇತುವೆಗಳಿಲ್ಲ. ಇದಕ್ಕೆ ಜಿಲ್ಲೆಯ ಕಳಸ ತಾಲೂಕಿನಲ್ಲಿ ಬರುವ ಹತ್ತಾರು ಹಳ್ಳಿಗಳು ಸಾಕ್ಷಿ.
ಹೌದು ಕಳಸ ತಾಲೂಕಿನ ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹತ್ತಾರು ಹಳ್ಳಿಗಳು ಇಂದಿಗೂ ಕನಿಷ್ಟ ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. ತಾಲೂಕಿನ ಎಸ್ಕೆ ಮೇಗಲ್, ಕೊಣೆಗೋಡು, ವಾಟೆಹಳ್ಳ ಗ್ರಾಮಸ್ಥರು ಮಳೆಗಾಲದಲ್ಲಿ ಹಳ್ಳ ದಾಟಲು ಪರದಾಟ ನಡೆಸುತ್ತಿದ್ದಾರೆ. ಈ ಪ್ರದೇಶಗಳಲ್ಲಿ ರಸ್ತೆ, ಕಿರು ಸೇತುವೆ ಜೊತೆಗೆ ನೆಟ್‌ವರ್ಕ್ ಸಮಸ್ಯೆ ಇದೆ. ಶೀಘ್ರವೇ ಸಮಸ್ಯೆ ಸರಿಪಡಿಸಿದರೆ ಸಾಕು. ನಮಗೆ ಬೇರೇನೂ ಬೇಡ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
"ಎಸ್ಕೆ ಮೇಗಲ್ ಗ್ರಾಮದ ಕೊಣೆಗೋಡು ಪ್ರದೇಶದಲ್ಲಿ ರಸ್ತೆ ಹಾಗೂ ಸೇತುವೆ ಸೌಕರ್ಯಕ್ಕಾಗಿ ಜನರು ಬೇಡಿಕೆಯಿಟ್ಟಿದ್ದಾರೆ. ಕೊಣೆಗೋಡು ಹೊಸಗದ್ದೆ ರಸ್ತೆ ಹಾಗೂ ಕಿರು ಸೇತುವೆಗೆ ಈಗಾಗಲೇ 40 ಲಕ್ಷ ಹಾಗೂ ವಾಟೆ ಹಳ್ಳ ಸೇತುವೆ ಅಭಿವೃದ್ಧಿಗೆ 40 ಲಕ್ಷ ಮಂಜೂರು ಆಗಿದೆ. ಆದರೆ, ಈವರೆಗೆ ಯಾವುದೇ ಕಾಮಗಾರಿ ಆರಂಭವಾಗಿಲ್ಲ. ಒಂದೆಡೆ ಗ್ರಾಮದ ಸಂಪರ್ಕ ರಸ್ತೆ ಹದಗೆಟ್ಟಿದೆ. ಇನ್ನೊಂದಡೆ ಗ್ರಾಮದಲ್ಲಿ ಮೊಬೈಲ್ ನೆಟ್‌ವರ್ಕ್ ಇಲ್ಲ. ಇದರಿಂದ ಗ್ರಾಮ ಜನರು ಜಗತ್ತಿನ ಸಂಪರ್ಕದಿಂದ ದೂರವುಳಿದಿದ್ದಾರೆ. 50 ಕ್ಕೂ ಹೆಚ್ಚು ಮನೆಗಳಿರುವ ಈ ಪ್ರದೇಶದ ಜನರು ಮಳೆಗಾಲದಲ್ಲಿ ಹಳ್ಳ ದಾಟಿ ಕಳಸ ಪಟ್ಟಣಕ್ಕೆ ಬರುವುದು ಕಷ್ಟಕರವಾಗಿದೆ" ಎಂದು ಗ್ರಾಮದ ಜನರು ಅಲಳು ತೋಡಿಕೊಂಡಿದ್ದಾರೆ.