ಚಿಕ್ಕಮಗಳೂರು: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕನೋರ್ವ ಕಾಡಾನೆ ದಾಳಿಯಿಂದ ಕೂದಲೆಳೆಯ ಅಂತರದಲ್ಲಿ ಪಾರಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹೊರನಾಡು ಸಮೀಪದ ಹೆಬ್ಬಾಳೆ ಗ್ರಾಮದಲ್ಲಿ ನಡೆದಿದೆ. ಹೆಬ್ಬಾಳೆ ಸಮೀಪದ ಕಾಫಿ ತೋಟಕ್ಕೆ ಸೈಲೆಂಟ್ ಆಗಿ ಎಂಟ್ರಿ ಕೊಟ್ಟ ಕಾಡಾನೆ ಏಕಾಏಕಿ ಕಾರ್ಮಿಕನ ಮೇಲೆ ದಾಳಿಗೆ ಮುಂದಾಗಿದೆ. ಆನೆಯನ್ನು ಕಂಡ ಕೂಡಲೇ ಕಾರ್ಮಿಕ ಕೂಗುತ್ತ ಜೀವ ಭಯದಲ್ಲಿ ಓಡಿ ಹೋಗಿದ್ದಾನೆ. ಕಾಡಾನೆ ಕೂಡ ಆತನ ಹಿಂದೆಯೇ ಓಡಿದೆ. ಸ್ವಲ್ಪ ದೂರ ಅಟ್ಟಿಸಿಕೊಂಡು ಬಂದ ಒಂಟಿ ಸಲಗ ನಂತರ ವಾಪಸ್ ಹೋಗಿದೆ.
ಅಷ್ಟೇ ಅಲ್ಲದೆ, ಬುಧವಾರ ಬೆಳಗಿನ ಜಾವ ಕಳಸ ತಾಲೂಕಿನ ಮುಂಡುಗದ ಗ್ರಾಮದ ಮನೆಯೊಂದರ ಪಕ್ಕದ ಕಾಫಿ ತೋಟದಲ್ಲಿ ಕಾಡಾನೆ ಬಂದು ನಿಂತಿತ್ತು. ಮುಂಜಾನೆ ಮನೆಯಿಂದ ಹೊರಬಂದ ಮನೆಯವರು ಆನೆಯನ್ನು ನೋಡಿ ಭಯಗೊಂಡು ಕೂಡಲೇ ಒಳಗೆ ಹೋಗಿದ್ದರು. ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರು ಜೀವಭಯದಲ್ಲಿ ಬದುಕುವಂತಾಗಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಮೂಡಿಗೆರೆ ತಾಲೂಕಿನಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿತ್ತು. ಇದೀಗ ಆನೆಗಳ ಹಾವಳಿ ಮೂಡಿಗೆರೆಯಿಂದ ಕಳಸಕ್ಕೆ ಶಿಫ್ಟ್ ಆಗಿದ್ದು, ಮೂರ್ನಾಲ್ಕು ವರ್ಷದಲ್ಲಿ ಏಳೆಂಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಾಗಾಗಿ, ಅರಣ್ಯ ಇಲಾಖೆ ಕೂಡಲೇ ಕಾಡಾನೆಯನ್ನು ಸೆರೆ ಹಿಡಿದು ಬೇರೆಡೆ ಸ್ಥಳಾಂತರ ಮಾಡಬೇಕೆಂದು ಸ್ಥಳೀಯರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಕಾಫಿ ತೋಟದಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿದ್ದ ಪುಂಡಾನೆ ಸೆರೆ.. ನಿಟ್ಟುಸಿರು ಬಿಟ್ಟ ಜನತೆ