ಚಿಕ್ಕಮಗಳೂರು:ಅದು ದಟ್ಟ ಕಾನನದ ಕುಗ್ರಾಮ. ಇರೋದು ಮೂರೇ ಮನೆ. ಮೂರೇ ಜನ. 1980 ರಿಂದಲೂ ಈ ಮೂವರು ಇಲ್ಲೇ ವಾಸ ಮಾಡುತ್ತಿದ್ದಾರೆ. ಇಬ್ಬರು ವೃದ್ಧೆಯರು. ಓರ್ವ ಪುರುಷ ಬಿಟ್ಟರೆ ಮತ್ತೊಬ್ಬ ವ್ಯಕ್ತಿ ಈ ಪ್ರದೇಶದಲ್ಲಿ ಕಾಣಸಿಗಲ್ಲ. ತಾಲೂಕು ಕೇಂದ್ರದಿಂದ 28 ಕಿ.ಮೀ. ದೂರದ ಈ ಊರಿಗೆ ಓಡಾಡೋಕೆ ರಸ್ತೆಯೂ ಇಲ್ಲ. ಕುಡಿಯೋಕೆ ನೀರೂ ಇಲ್ಲ. ವಿದ್ಯುತ್ ಸಂಪರ್ಕವೂ ಇಲ್ಲ.
ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ರಾಷ್ಟ್ರೀಯ ಉದ್ಯಾನವದ ಅಂಚಿನ ಕುನ್ನಿಹಳ್ಳ ಗ್ರಾಮದಲ್ಲಿ ದೇವರಾಜ್, ನಾಗರತ್ನ, ಶ್ಯಾಮಲ ಎಂಬುವರು ಮಾತ್ರ ವಾಸಿಸುತ್ತಿದ್ದಾರೆ. ಕುದುರೆಮುಖ ಕಂಪನಿ ಆರಂಭವಾದಾಗಿನಿಂದಲೂ ಈ ಮೂವರು ಇಲ್ಲೇ ವಾಸವಿದ್ದಾರೆ. ಇವರಿಗೆ ರಸ್ತೆ, ನೀರು, ಕರೆಂಟ್ ಯಾವ ವ್ಯವಸ್ಥೆಯೂ ಇಲ್ಲ. ಸರ್ಕಾರದಿಂದ ಕೊಟ್ಟಿರುವ ಸೋಲಾರ್ ಲೈಟ್ ಇದೆ. ಆದ್ರೆ, ವರ್ಷದ 6 ತಿಂಗಳು ಯಥೇಚ್ಛವಾಗಿ ಮಳೆ ಬೀಳುವ ಕಾರಣ ಸೋಲಾರ್ ಲೈಟ್ ಕೂಡ ಕೈಕೊಡುತ್ತೆ. ಈ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಕಾಟ ಕೂಡ ಹೆಚ್ಚಾಗಿಯೇ ಇದೆ. ಇಲ್ಲಿಂದ ಸ್ಥಳಾಂತರಿಸಿ ಎಂದು ಮನವಿ ಮಾಡಿದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಈ ಮೂವರು ನಿವಾಸಿಗಳು ಆರೋಪಿಸಿದ್ದಾರೆ.
ಈ ಬಗ್ಗೆ ಗ್ರಾಮದ ನಿವಾಸಿ ದೇವರಾಜ್ ಮಾತನಾಡಿ, ಪ್ರತಿಯೊಂದು ವಸ್ತು ಖರೀದಿ ಮಾಡಲು ಕಳಸಕ್ಕೆ ಬರಬೇಕಾಗುತ್ತದೆ. ರೇಷನ್ ಒಂದು ಕುದುರೆಮುಖದಲ್ಲಿ ಸಿಗುತ್ತೆ. ಅದನ್ನ ಬಿಟ್ಟು ಎಲ್ಲದಕ್ಕೂ ಕಳಸಕ್ಕೆ ಬರಬೇಕಾದ ಪರಿಸ್ಥಿತಿ. ಮನೆ-ಜಾಗ ಎಲ್ಲದಕ್ಕೂ ಹಕ್ಕು ಪತ್ರಗಳಿವೆ. ಮನೆಯಲ್ಲಿ ಜನರಿಗಿಂತ ಜಾಸ್ತಿ ಹಾವು ಕಪ್ಪೆಗಳೇ ಕಾಣಿಸಿಕೊಳ್ಳುತ್ತವೆ. ತಮ್ಮನ್ನು ಬೇರೊಂದು ಸ್ಥಳಕ್ಕೆ ಸ್ಥಳಾಂತರಿಸಲು ಮನವಿ ಮಾಡುತ್ತಲೇ ಇದ್ದರೂ ಇದಕ್ಕೆ ಯಾರು ಸ್ಪಂದಿಸುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.