ಚಿಕ್ಕಮಗಳೂರು: 'ಪಾಕಿಸ್ತಾನ ಜಿಂದಾಬಾದ್' ಎಂದು ಘೋಷಣೆ ಕೂಗಿ ದೇಶದ್ರೋಹದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ, ಕೊಪ್ಪ ಮೂಲದ ವಿದ್ಯಾರ್ಥಿನಿ ಅಮೂಲ್ಯ ಲಿಯೊನಾ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಇನ್ನು ಯುವತಿಯು ತಮ್ಮ ಹುಟ್ಟೂರಾದ ಜಿಲ್ಲೆಯ ಕೊಪ್ಪ ತಾಲೂಕಿನ ಗುಬ್ಬಗದ್ದೆಯ ಗ್ರಾಮಕ್ಕೆ ಬಂದರೆ, ಆಕೆಯ ವಿರುದ್ಧ ಪ್ರತಿಭಟನೆ ಮಾಡಲಾಗುವುದು ಎಂದು ಕೊಪ್ಪ ತಾಲೂಕಿನ ಬಭಜರಂಗದಳ ಸಂಘಟನೆ ಎಚ್ಚರಿಕೆಯನ್ನು ನೀಡಿದೆ.
ಕೊಪ್ಪಗೆ ಬರದ ಹಾಗೇ ಸಂಭಂದಪಟ್ಟ ಅಧಿಕಾರಿಗಳು, ಆಕೆಯ ಮೇಲೆ ಎಚ್ಚರಿಕೆಯನ್ನು ವಹಿಸಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೊಪ್ಪ ಬಜರಂಗದಳ ಪೋಸ್ಟ್ ಮಾಡಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಜಿಲ್ಲೆಯಾದ್ಯಂತ ಈ ಪೋಸ್ಟ್ ವೈರಲ್ ಆಗುತ್ತಿದೆ.
ಬೆಂಗಳೂರಿನಲ್ಲಿ ಸಿಎಎ ಹಾಗೂ ಎನ್‌ಆರ್‌ಸಿಯನ್ನು ವಿರೋಧಿಸಿ ಫೆಬ್ರವರಿ 21 ರಂದು ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಸಂಸದ ಅಸಾದುದ್ದಿನ್ ಓವೈಸಿ ಭಾಗಿಯಾಗಿದ್ದ ಈ ಸಮಾವೇಶದಲ್ಲಿ ಅಮೂಲ್ಯ 'ಪಾಕಿಸ್ತಾನ ಜಿಂದಾಬಾದ್' ಎಂದು ಘೋಷಣೆ ಕೂಗಿದ್ದರು.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಅಮೂಲ್ಯ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಕಳೆದ ಮೂರು ತಿಂಗಳು ಜೈಲಿನಲ್ಲಿದ್ದ ಯುವತಿ, ಸಿಆರ್ಪಿಸಿ ಸೆಕ್ಷನ್ 162 ಕಲಂ 2 ಅಡಿಯಲ್ಲಿ ಷರತ್ತು ಬದ್ಧ ಜಾಮೀನಿನ ಮೇಲೆ ಹೊರ ಬಂದಿದ್ದಾರೆ.