ಚಿಕ್ಕಮಗಳೂರು :1959ರಲ್ಲಿ ಎನ್.ಆರ್.ಪುರ ತಾಲೂಕಿನ ಭದ್ರಾ ಹಿನ್ನೀರಿನ ಪ್ರದೇಶದಲ್ಲಿ ಸರ್ಕಾರವೇ ಜಾಗ ನೀಡಿ ನಮ್ಮನ್ನ ಸ್ಥಳಾಂತರ ಮಾಡಿತ್ತು. ಆದರೆ, ಇಂದು ದಾಖಲೆ ನೀಡುತ್ತಿಲ್ಲ ಎಂದು ತರೀಕೆರೆ ತಾಲೂಕಿನ ಲಕ್ಕವಳ್ಳಿ ಹೋಬಳಿಯ ಕೆಂಚಿಕೊಪ್ಪ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಪಂ ಚುನಾವಣೆ ಬಹಿಷ್ಕರಿಸಿದ ಕೆಂಚಿಕೊಪ್ಪ ಗ್ರಾಮಸ್ಥರು.. ಲಕ್ಕವಳ್ಳಿ ಹೋಬಳಿಯ ಕೆಂಚಿಕೊಪ್ಪ ಗ್ರಾಮ ಪಂಚಾಯತ್‌ನ ಕೆಂಚಿಕೊಪ್ಪ, ಕುಂದೂರು, ದೊಡ್ಡಕುಂದೂರು, ಮಾಳಿಕೊಪ್ಪ, ಮಠದಹಳ್ಳಿ, ಮಂಡರವಳ್ಳಿ ಸೇರಿ ಸುಮಾರು ಎರಡು ಸಾವಿರ ಕುಟುಂಬಗಳು ಚುನಾವಣೆ ಬಹಿಷ್ಕರಿಸಿ ತಮ್ಮ ಬದುಕಿಗಾಗಿ ಹೋರಾಟ ನಡೆಸುತ್ತಿವೆ.
ಗ್ರಾ.ಪಂ ಚುನಾವಣೆ ಬಹಿಷ್ಕರಿಸಿದ ಕೆಂಚಿಕೊಪ್ಪ ಗ್ರಾಮಸ್ಥರು 1959ನೇ ಇಸವಿಯಲ್ಲಿ ಇಲ್ಲಿಗೆ ಬಂದ ಕುಟುಂಬಗಳಿಗೆ ಸರ್ಕಾರವೇ ಜಾಗ ನೀಡಿತ್ತು. 2013ನೇ ಇಸವಿಯವರೆಗೂ ಸರ್ಕಾರ ಕೈ ಬರಹದಲ್ಲಿ ಮನೆ, ಹೊಲ-ಗದ್ದೆ-ತೋಟಗಳಿಗೆ ದಾಖಲೆ ನೀಡುತ್ತಿತ್ತು. ಆದರೆ, 2013ರಿಂದ ಈಚೆಗೆ ಅಂದರೆ ಕಳೆದ ಏಳು ವರ್ಷಗಳಿಂದ ಇ-ಸ್ವತ್ತು ದಾಖಲೆ ಮಾಡಿಕೊಡುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಈ ಭಾಗದಲ್ಲಿ ಸುಮಾರು ಮೂರುವರೆ ಸಾವಿರ ಕುಟುಂಬಗಳು ವಾಸವಾಗಿವೆ. ಸುಮಾರು 10-15 ಸಾವಿರ ಜನ ಬದುಕಿನ ಭದ್ರೆತೆಗಾಗಿ ಚುನಾವಣೆ ಬಹಿಷ್ಕರಿಸಿ ಹೋರಾಟಕ್ಕಿಳಿದಿದ್ದಾರೆ. ಅಲ್ಲದೇ ಈ ಭಾಗ ಹುಲಿ ಯೋಜನೆಗೆ ಒಳಪಟ್ಟಿದ್ದು, ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ. ಈಗಾಗಲೇ ಈ ಪ್ರದೇಶದಲ್ಲಿ ಹುಲಿ-ಚಿರತೆ ಕಾಟ ಕೂಡ ಆರಂಭವಾಗಿದ್ದು, ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ.