ಚಿಕ್ಕಮಗಳೂರು :ರಾಜ್ಯದ ಗಡಿಯಲ್ಲಿ ಕನ್ನಡಿಗರ ಮೇಲೆ ಮರಾಠಿಗರನ್ನು ಎತ್ತಿಕಟ್ಟಿ ದ್ವೇಷದ ವಾತಾವರಣ ಮೂಡಿಸಿ ಅಶಾಂತಿ ಮೂಡಿಸಲು ಯತ್ನಿಸುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಹಾಗೂ ಶಿವಸೇನೆಯನ್ನು ರಾಜ್ಯದಲ್ಲಿ ನಿಷೇಧಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಚಿಕ್ಕಮಗಳೂರು ಘಟಕದ ಕಾರ್ಯಕರ್ತರು ನಗರದ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ನಗರದ ಹನುಮಂತಪ್ಪ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ನೂರಾರು ಕರವೇ ಕಾರ್ಯಕರ್ತರು ಎಂಇಎಸ್ ಹಾಗೂ ಶಿವಸೇನೆ ವಿರುದ್ದ ಧಿಕ್ಕಾರದ ಘೋಷಣೆ ಕೂಗುತ್ತಾ ತಾಲೂಕು ಕಚೇರಿ ಮುತ್ತಿಗೆ ಹಾಕಲು ಯತ್ನಿಸಿದರು.
ಭಾಷಾವಾರು ಪ್ರಾಂತ್ಯ ವಿಂಗಡಣೆಯ ಬಳಿಕ ಮಹಾರಾಷ್ಟ್ರ ರಾಜಕಾರಣಿಗಳು ಅಲ್ಲಿನ ಸರ್ಕಾರಗಳ ಪ್ರಚೋದನೆಯಿಂದ ಬೆಳಗಾವಿಯಲ್ಲಿ ಪದೇಪದೆ ಅಶಾಂತಿಯ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ.
ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಕನ್ನಡಿಗರ ಮೇಲೆ ಮರಾಠಿಗನ್ನು ಎತ್ತಿಕಟ್ಟುವ ಮೂಲಕ ದ್ವೇಷದೊಂದಿಗೆ ಅಶಾಂತಿ ಮೂಡಿಸುವ ಕೆಲಸ ನಡೆಯುತ್ತಿದೆ ಎಂದು ಕಿಡಿಕಾರಿದರು.
ಇದನ್ನೂ ಓದಿ: ಕಾರ್ಯಕಾರಣಿಯಲ್ಲಿ ಅಪಹಾಸ್ಯಕ್ಕೀಡಾದ ಬಿಜೆಪಿ.. ಭಾರತಾಂಬೆಯ ಚಿತ್ರದಲ್ಲಿ ಪಾಕ್ ಧ್ವಜ..
ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿ ಅಪಮಾನ ಮಾಡಿರುವುದಲ್ಲದೇ ಸ್ವಾತಂತ್ರ್ಯ ಹೋರಾಟಗಾರ, ವೀರ ಸೇನಾನಿ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಭಗ್ನಗೊಳಿಸಿ ಕೋಮುದ್ವೇಷ ಉಂಟಾಗುವಂತೆ ಮಾಡಿರುವುದು ಖಂಡನೀಯ.