ಚಿಕ್ಕಮಗಳೂರಲ್ಲಿ ಧಾರಾಕಾರ ಮಳೆ ಚಿಕ್ಕಮಗಳೂರು/ಶಿವಮೊಗ್ಗ:ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಮಳೆರಾಯನ ಅಬ್ಬರ ದಿನದಿಂದ ದಿನಕ್ಕೆ ಜೋರಾಗುತ್ತಲೇ ಇದೆ. ನದಿಗಳು ಮೈದುಂಬಿ ಹರಿಯುತ್ತಿವೆ. ಜಲಾಶಯಗಳು ಭರ್ತಿಯಾಗಿವೆ. ಅಲ್ಲಲ್ಲಿ ಅವಾಂತರಗಳೂ ಸೃಷ್ಟಿಯಾಗಿದ್ದು, ಜನಜೀವನಕ್ಕೆ ತೊಂದರೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಬಸರೀಕಟ್ಟೆ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಹಿಂಬದಿಯ ಕಾಂಪೌಂಡು ಕುಸಿದು ಬಿದ್ದಿದೆ. ಕಾಂಪೌಂಡ್ ಕುಸಿಯುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಇನ್ನು ಜಯಪುರ-ಶೃಂಗೇರಿ ರಸ್ತೆಯ ಬದಿಯಲ್ಲಿ ಹಾನಿ ಉಂಟಾಗಿದ್ದು, ಮಳೆಯಿಂದಾಗಿ ಇನ್ನಷ್ಟು ಕುಸಿಯುವ ಭೀತಿ ಎದುರಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ.
ಅನೇಕ ಕಡೆಗಳಲ್ಲಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ರಸ್ತೆಯಲ್ಲೆಲ್ಲ ನೀರು ಹರಿಯುತ್ತಿರುವುದರಿಂದ ಸಂಚಾರಕ್ಕೆ ಅಡ್ಡಿಯಾಗಿದೆ. ಮೂಡಿಗೆರೆ ತಾಲೂಕಿನ ಬಣಕಲ್ ಬಳಿ ಒಂದೇ ಸ್ಥಳದಲ್ಲಿ ಹೇಮಾವತಿ ನದಿಗೆ ಸ್ವಿಫ್ಟ್ ಹಾಗೂ ಇನೋವಾ ಕಾರು ಪಲ್ಟಿಯಾಗಿ ಬಿದ್ದಿದೆ. ಇಬ್ಬರು ಚಾಲಕರ ನಿಯಂತ್ರಣ ತಪ್ಪಿ ಎರಡು ವಾಹನಗಳು ಅಪಘಾತಕ್ಕೀಡಾಗಿವೆ. ಎರಡು ಕಾರಿನ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಜಿಲ್ಲೆಯ ಕಳಸ ತಾಲೂಕಿನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ವಿದ್ಯುತ್ ತಂತಿಗೆ ಬೆಂಕಿ ಹೊತ್ತಿಕೊಂಡು ಭದ್ರಾ ನದಿಗೆ ತುಂಡಾಗಿದೆ. ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಬಳಿ ಭದ್ರಾ ನದಿಗೆ ಬಿದ್ದ ವಿದ್ಯುತ್ ತಂತಿಯಿಂದಾಗಿ ಹೊರನಾಡು, ಬಲಿಗೆ ಸೇರಿದಂತೆ ಹತ್ತಾರು ಹಳ್ಳಿಗಳ ಕರೆಂಟ್ ಕಟ್ ಆಗಿದೆ. ಭಾರೀ ಗಾಳಿ-ಮಳೆ ಮಧ್ಯೆ ದುರಸ್ತಿ ಕೂಡ ಕಷ್ಟ ಸಾಧ್ಯವಾಗಿದೆ. ಕಡೂರು ತಾಲೂಕಿನ ಬಯಲು ಭಾಗಕ್ಕೆ ನೀರುಣಿಸುವ ಮದಗದ ಕೆರೆ ತುಂಬಿ ಹರಿಯುತ್ತಿದೆ. ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಮದಗದ ಕೆರೆ ಸುಮಾರು 336 ಹೆಕ್ಟೇರ್ (2036 ಎಕರೆ) ವಿಸ್ತೀರ್ಣ ಹೊಂದಿದೆ. 15 ದಿನಗಳ ಹಿಂದೆ ಸಂಪೂರ್ಣ ಖಾಲಿಯಾಗಿದ್ದು, ಕೆರೆಯಲ್ಲಿ ಅರ್ಧಕ್ಕಿಂತ ಹೆಚ್ಚು ನೀರು ತುಂಬಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ತೀರ್ಥಹಳ್ಳಿ, ಹೊಸನಗರ, ಸಾಗರ ತಾಲೂಕಿನ ಶಾಲೆಗಳಿಗೆ ರಜೆ :ಅಪ್ಪಟ ಮಲೆನಾಡಿನ ತಾಲೂಕುಗಳಾದ ತೀರ್ಥಹಳ್ಳಿ, ಸಾಗರ ಹಾಗೂ ಸೊರಬಗಳಲ್ಲಿ ಮಳೆ ವ್ಯಾಪಕವಾಗಿ ಸುರಿಯುತ್ತಿರುವುದರಿಂದ ಇಂದು ಮೂರು ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ತಾಲೂಕಿನಲ್ಲಿ ಮಳೆಯ ಪ್ರಮಾಣ ನೋಡಿಕೊಂಡು ಆಯಾ ಶಾಲೆಯ ಎಸ್‌ಡಿಎಂಸಿ ಅವರು ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಜೊತೆ ಮಾತನಾಡಿ ರಜೆ ನೀಡುವಂತೆ ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಮ್ಮ ಆದೇಶದಲ್ಲಿ ಸೂಚಿಸಿದ್ದಾರೆ.
ಸೋಮವಾರ ಹೊಸನಗರ ಬಿಇಒ ಕೃಷ್ಣಮೂರ್ತಿ ಹೊಸನಗರದ ನಿಟ್ಟೂರು ಹಾಗೂ ನಗರ ಹೋಬಳಿಗಳ ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದರು. ಆದರೆ ನಂತರದಲ್ಲಿ ಡಿಡಿಪಿಐ ಅವರು ಮೂರು ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಿ, ಶಾಲೆಗಳಿಗೆ ರಜೆ ನೀಡುವುದಾದರೆ ನಿಮ್ಮ ಬಿಇಒಗಳ ಜೊತೆ ಮಾತನಾಡಬೇಕೆಂದು ನಿರ್ದೇಶನ ನೀಡಿದ್ದಾರೆ.
ಇದನ್ನೂ ಓದಿ: Karnataka Rains: ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ: ಅಪಾಯ ಮಟ್ಟ ಮೀರಿದ ಅಘನಾಶಿನಿ, ಗಂಗಾವಳಿ ನದಿ; ಶಾಲಾ-ಕಾಲೇಜುಗಳಿಗೆ ರಜೆ