ಚಿಕ್ಕಮಗಳೂರು : ದೇಶ ಅಭಿವೃದ್ಧಿ ಹೊಂದುತ್ತಿದ್ದು, ಡಿಜಿಟಲ್ ಇಂಡಿಯಾ 4 ಜಿ, 5 ಜಿ ಎಂದು ಹೆಮ್ಮೆಪಡುತ್ತಿರುವ ಈ ಸಮಯದಲ್ಲಿ 2 ಜಿ ನೆಟ್ವರ್ಕ್ ಕೂಡ ಸಿಗದೆ ಪರಿತಪಿಸುತ್ತಿರುವ ಅನೇಕ ಗ್ರಾಮಗಳು ಅನೇಕ ಇವೆ. ಇದರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಬಿಳಗಲ್ ಗ್ರಾಮ ಕೂಡ ಒಂದಾಗಿದೆ.
ಹೌದು, ಈ ಗ್ರಾಮದಲ್ಲಿ 35 ರಿಂದ 40 ಮನೆಗಳಿವೆ. ಎಲ್ಲ ಗಿರಿಜನ ಕುಟುಂಬದವರೇ ವಾಸಿಸುತ್ತಿದ್ದಾರೆ. ನೈಸರ್ಗಿಕವಾಗಿ ಈ ಪ್ರದೇಶದಲ್ಲಿ ಯಥೇಚ್ಛವಾಗಿ ಮಳೆ ಸುರಿಯೋದ್ರಿಂದ ನೀರು ಸಮೃದ್ಧವಾಗಿರುತ್ತದೆ. ಆದರೆ, ಈ ಕುಗ್ರಾಮ ಎಲ್ಲ ರೀತಿಯ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ತುರ್ತು ಕರೆ ಮಾಡಬೇಕು ಅಂದ್ರೆ ಫೋನ್ ತೆಗೆದುಕೊಂಡು ಮೂರು ಕಿ.ಮೀ. ಬರಬೇಕು. ಅಲ್ಲಿ ಸಹ ಕೈಯಲ್ಲಿ ಮೊಬೈಲ್ ಹಿಡಿದು ನೆಟ್ವರ್ಕ್ ಹುಡುಕಬೇಕು. ಕರೆಂಟ್ ನೋಡೋದು ಹದಿನೈದು ದಿನಕ್ಕೊಮ್ಮೆ. ಅಕ್ಕಿ - ಕೃಷಿ ಸಂಬಂಧಿತ ಸಾಮಗ್ರಿಗಳನ್ನು ತರಲು 40 ಕಿ.ಮೀ ಹೋಗಬೇಕು ಎಂದು ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ :ಅಂಕೋಲಾದ ಕೆಂದಗಿ ಗ್ರಾಮಕ್ಕಿಲ್ಲ ರಸ್ತೆ : ಗಾಯಾಳುವನ್ನ ಜೋಳಿಗೆಯಲ್ಲಿಟ್ಟು 15 ಕಿ.ಮೀ ಸಾಗಿಸಿದ ಗ್ರಾಮಸ್ಥರು
"ಕಳಸ ತಾಲೂಕಿನ ರಾಷ್ಟ್ರೀಯ ಉದ್ಯಾನ ಕುದುರೆಮುಖದ ತಪ್ಪಲಿನಲ್ಲಿನ ಬರುವ ಈ ಗ್ರಾಮದಲ್ಲಿ ಜನರಿಗೆ ಯಾವ ಸೌಲಭ್ಯವೂ ಇಲ್ಲ. ಗ್ರಾಮದಲ್ಲಿ ಯಾರಿಗಾದರೂ ಹುಷಾರಿಲ್ಲ ಅಂದಾಗ ಫೋನ್ ಮಾಡುವುದಕ್ಕೂ ಮೂರು ಕಿ.ಮೀ. ಬರಬೇಕು. ಸರ್ಕಾರ ಇಲ್ಲಿನ ನಿವಾಸಿಗಳಿಗೆ ಒಂದು, ಒಂದೂವರೆ, ಎರಡು ಎಕರೆ ಜಮೀನು ನೀಡಿದೆ. ಆದರೆ, ಹಲವು ಜನರಿಗೆ ಇನ್ನೂ ಹಕ್ಕುಪತ್ರ ನೀಡಿಲ್ಲ. ಹಕ್ಕುಪತ್ರಕ್ಕಾಗಿ ಕೇಳಿ ಕೇಳಿ ಈಗ ಸುಮ್ಮನಾಗಿದ್ದಾರೆ" ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.