ಚಿಕ್ಕಮಗಳೂರು: ಹೆಬ್ಬೆ ತಿರುವು ಹಾಗೂ ಗೊಂದಿನಾಲೆ ಯೋಜನೆಯನ್ನು ಶೀಘ್ರ ಅನುಷ್ಟಾನ ಮಾಡಬೇಕೆಂದು ಒತ್ತಾಯಿಸಿ ಕಡೂರು ಮತ್ತು ಬೀರೂರು ಪಟ್ಟಣಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು.
ಚಿಕ್ಕಮಗಳೂರು ಜಿಲ್ಲೆ ಹಾಗೂ ಕಡೂರು ಸುತ್ತ ಮುತ್ತ ಸುದೀರ್ಘ ಕಾಲದಿಂದ ಸರಿಯಾಗಿ ಮಳೆಯಾಗದೇ ಬರದ ಛಾಯೆ ಎದುರಾಗಿದೆ. ಕಳೆದ ಎರಡು ದಶಕಗಳಿಂದಲೂ ಇಲ್ಲಿನ ಜನರು ಹಾಗೂ ಜಾನುವಾರುಗಳು ಹನಿ ನೀರಿಗೂ ತತ್ವಾರ ಅನುಭವಿಸುತ್ತಿದ್ದಾರೆ. ಅಡಿಕೆ ತೆಂಗು ಸೇರಿದಂತೆ ಹಲವು ತೋಟಗಾರಿಕೆ ಬೆಳೆಗಳು ಈಗಾಗಲೇ ಒಣಗಿ ನೆಲಕಚ್ಚಿ ಹೋಗಿದೆ.
ನೀರಾವರಿ ಯೋಜನೆ ಪೂರ್ಣಗೊಳಿಸುವಂತೆ ಆಗ್ರಹಿಸಿ ಕಡೂರು ಬೀರೂರು ಬಂದ್ ಆದರೆ ಈವರೆಗೂ ಕಡೂರು ತಾಲೂಕಿಗೆ ಯಾವುದೇ ನೀರಾವರಿ ಯೋಜನೆ ಅನುಷ್ಟಾನವಾಗಿಲ್ಲ. ಕಳೆದ ಹಲವು ವರ್ಷಗಳಿಂದಲೂ ಇಲ್ಲಿನ ಜನ ಹೆಬ್ಬೆ ತಿರುವು ಹಾಗೂ ಗೊಂದಿನಾಲೆ ಯೋಜನೆಯನ್ನು ಅನುಷ್ಟಾನ ಮಾಡಬೇಕೆಂದು ಹೋರಾಟ ಮಾಡುತ್ತಲೇ ಬಂದಿದ್ದಾರೆ. ಆದ್ರೆ ಯಾವುದೇ ಪ್ರಯೋಜನೆಗಳಾಗಿಲ್ಲ.
ಈ ಭಾರಿಯ ಸಮ್ಮಿಶ್ರ ಸರ್ಕಾರ ಬಜೆಟ್ನಲ್ಲಿ ಹೆಬ್ಬೆ ತಿರುವು ಯೋಜನೆಗೆ 100 ಕೋಟಿ ಮೀಸಲಿಡಲಾಗಿತ್ತು. ಆದರೆ ಈವೆರೆಗೂ ಕಾಮಗಾರಿಗೆ ಚಾಲನೆ ನೀಡಿಲ್ಲ. ಈ ಭಾರಿ ತಾಲೂಕಿಗೆ ನೀರಿನ ಅಭಾವ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಅಡಿಕೆ ಬೆಳೆಗಾರರ ಸಂಘ ಸೇರಿದಂತೆ ಹಲವು ಸಂಘಟನೆಗಳ ನೇತೃತ್ವದಲ್ಲಿ ಅವಳಿ ಪಟ್ಟಣಗಳಾದ ಕಡೂರು, ಬೀರೂರು ಪಟ್ಟಣಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಗ್ರಾಹಕರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದರೆ, ಆಟೋ ಚಾಲಕರು, ಖಾಸಗಿ ಬಸ್ ಸಂಚಾರವನ್ನು ಸ್ವಯಂಕೃತವಾಗಿ ನಿಲ್ಲಿಸಿ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಬರದ ನಾಡಿಗೆ ನೀರುಣಿಸಬೇಕಾಗಿದ್ದ ಯೋಜನೆಯೊಂದು ಅನುಷ್ಟಾನಗೊಳ್ಳಲು ಸಾಕಷ್ಟು ಕಾಲ ತೆಗೆದುಕೊಳ್ಳುತ್ತಿದೆ. ಆದರೆ ಇಲ್ಲಿನ ಜನರು ಮಾತ್ರ ಹನಿ ನೀರಿಗೂ ಪರದಾಟ ನಡೆಸುವ ಪರಿಸ್ಥಿತಿ ಎದುರಾಗಿದೆ. ಇನ್ನಾದರೂ ಸರ್ಕಾರ ಇತ್ತ ಗಮನ ಹರಿಸಿ ಈ ಯೋಜನೆಯನ್ನು ಕೂಡಲೇ ಪೂರ್ಣಗೊಳಿಸಿ ತಾಲೂಕಿನ ಜನರಿಗೆ ನೀರು ಕೊಟ್ಟು ಅವರ ಜೀವ ಉಳಿಸಬೇಕೆಂದು ಜನರು ಆಗ್ರಹಿಸಿದ್ದಾರೆ.