ಚಿಕ್ಕಮಗಳೂರು: ಜಾಗ ಗುರುತಿಸಿಕೊಟ್ಟಲ್ಲಿ ಜಿಲ್ಲಾ ವ್ಯಾಪ್ತಿಯ ಸರ್ಕಾರಿ ನೌಕರರಿಗೆ ರಿಯಾಯ್ತಿ ದರದ ಕ್ಯಾಂಟೀನ್ ನಿರ್ಮಾಣಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಹೇಳಿದ್ದಾರೆ. ಜಿಲ್ಲಾ ಸರ್ಕಾರಿ ನೌಕರರ ಕುಂದು-ಕೊರತೆ ಹಾಗೂ ಸೌಲಭ್ಯಗಳ ಕುರಿತು ಅಧಿಕಾರಿಗಳನ್ನೊಳಗೊಂಡ ಮೊದಲ ಜಂಟಿ ಸಮಾಲೋಚನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಗರದ ಕೋಟೆ ಭಾಗದಲ್ಲಿರುವ ಕಟ್ಟಡವನ್ನು ತಾತ್ಕಾಲಿಕವಾಗಿ ಬಳಕೆ ಮಾಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಹೊಸ ಕಟ್ಟಡ ನಿರ್ಮಿಸಲಾಗುವುದು. ವಿವಿಧ ಇಲಾಖೆಗಳ ಸರ್ಕಾರಿ ನೌಕರರ ಬಡ್ತಿ ಹಾಗೂ ವರ್ಗಾವಣೆಗೆ ಸಂಬಂಧಿಸಿದಂತೆ ಎಲ್ಲಾ ನೌಕರರು ಸೇವಾ ಮನೋಭಾವನೆಯಿಂದ ಕಾರ್ಯ ನಿರ್ವಹಿಸಬೇಕು ಎಂದರು.
ಜಿಲ್ಲೆಯ ಯಾವ ಭಾಗದಲ್ಲಾದ್ರೂ ಸೇವೆ ಸಲ್ಲಿಸಲು ಸಿದ್ಧರಾಗಿರಬೇಕು. ಮಲೆನಾಡು ಹಾಗೂ ದೂರದ ಸ್ಥಳಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆರೋಗ್ಯ, ಶಿಕ್ಷಣ ಇಲಾಖೆ ನೌಕರರನ್ನು ಇಂತಹ ಸನ್ನಿವೇಶದಲ್ಲಿ ವರ್ಗಾವಣೆಗೊಳಿಸಿದ್ದಲ್ಲಿ ಆ ಭಾಗದ ಜನತೆಗೆ ತೊಂದರೆಯಾಗಲಿದೆ. ಸದ್ಯ ವರ್ಗಾವಣೆ ಮತ್ತು ಇತರೆ ಇಲಾಖೆಗಳ ನೌಕರರ ಬಡ್ತಿ ಕುರಿತು 2 ತಿಂಗಳೊಳಗಾಗಿ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.
ಸರ್ಕಾರಿ ನೌಕರರ ವೈದ್ಯಕೀಯ ವೆಚ್ಚ ಮರುಪಾವತಿ ಕುರಿತು ಮಾತನಾಡಿದ ಅವರು, ಸದ್ಯ ಕೋವಿಡ್-19 ಹಿನ್ನೆಲೆ ವೆಚ್ಚ ಮರುಪಾವತಿ ತಡವಾಗಿದೆ. ಈ ಬಗ್ಗೆ ಕ್ರಮವಹಿಸಲಾಗುವುದು. ಹೆಚ್ಆರ್ಎಂಎಸ್ ಅಡಿ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ರಾಜ್ಯ ಮಟ್ಟದಲ್ಲಿ ಚರ್ಚೆಯಾಗಬೇಕಿದೆ ಎಂದರು. ಹೌಸಿಂಗ್ ಬೋರ್ಡ್‌ನಲ್ಲಿರುವ ಸರ್ಕಾರಿ ನೌಕರರ ಹೆಸರಿನ 35 ಗುಂಟೆ ಜಾಗದಲ್ಲಿ ಕಲ್ಯಾಣ ಮಂಟಪ ನಿರ್ಮಾಣದ ಅನುದಾನ ಕುರಿತು, ನಿರ್ಮಿತಿ ಕೇಂದ್ರದಿಂದ ಅನುದಾನ ಬಾಕಿಯಿದ್ದು, ಅನುದಾನ ಬಿಡುಗಡೆಗೊಳಿಸಲಾಗುವುದು ಎಂದು ಹೇಳಿದರು.