ಚಿಕ್ಕಮಗಳೂರು:ಜೆಡಿಎಸ್ ಮಾಜಿ ಶಾಸಕರು ಕಾಂಗ್ರೆಸ್ ಸೇರ್ಪಡೆ ಆಗಿರುವ ಹಿನ್ನೆಲೆಯಲ್ಲಿ ವರಿಷ್ಠರು ಅಲರ್ಟ್ ಆಗಿದ್ದು, ಇಂದು ಚಿಕ್ಕಮಗಳೂರಿನ ರೆಸಾರ್ಟ್ವೊಂದರಲ್ಲಿ ಸಭೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ರೆಸಾರ್ಟ್ನಲ್ಲಿದ್ದು, ಪಕ್ಷದ ಶಾಸಕರು ಕೂಡ ಇಲ್ಲಿಗೆ ಆಗಮಿಸಿದ್ದಾರೆ. ಆಪರೇಷನ್ ಹಸ್ತಕ್ಕೆ ರಣತಂತ್ರ ರೂಪಿಸಲು ದಳಪತಿಗಳು ಸಭೆ ಕರೆದಿದ್ದಾರೆ ಎನ್ನಲಾಗುತ್ತಿದೆ. ಸಭೆಯಲ್ಲಿ 19 ಹಾಲಿ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು ಭಾಗಿಯಾಗಲಿದ್ದಾರೆ. ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಧ್ಯಮಗೋಷ್ಠಿ ನಡೆಸುವ ಸಾಧ್ಯತೆ ಇದೆ.
ಈಗಾಗಲೇ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ, ಚಿಂತಾಮಣಿ ಮಾಜಿ ಶಾಸಕ ಕೃಷ್ಣಾರೆಡ್ಡಿ, ಮಾಗಡಿ ಮಾಜಿ ಶಾಸಕ ಮಂಜು, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಸೇರಿದಂತೆ 15ಕ್ಕೂ ಹೆಚ್ಚು ಶಾಸಕರು ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಜೆಡಿಎಸ್ ಸಭೆಯ ಬಳಿಕ ಎಸ್.ಎಲ್.ಭೋಜೇಗೌಡರ ಮಗಳ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಪಕ್ಷದ ನಾಯಕರು ಪಾಲ್ಗೊಳ್ಳಲಿದ್ದಾರೆ. ಇದಕ್ಕೂ ಮುನ್ನ ಸಭೆಯಲ್ಲಿ ಪಾಲ್ಗೊಂಡು ಒಗ್ಗಟ್ಟಿನ ಪ್ರದರ್ಶನಕ್ಕೆ 'ದಳ'ಪತಿಗಳು ಮುಂದಾಗಿರುವುದು ಮಹತ್ವದ ಬೆಳವಣಿಗೆಗೆ ಕಾರಣವಾಗಿದೆ.
ಕಾಂಗ್ರೆಸ್ ಆಪರೇಷನ್ ಹಸ್ತದಿಂದ ಎಚ್ಚೆತ್ತಿರುವ 'ದಳ'ಪತಿಗಳು ತಮ್ಮ ಶಾಸಕರನ್ನು ಹಿಡಿದಿಟ್ಟು ಸಭೆಗೆ ಮುಂದಾಗಿರುವುದು ಮಹತ್ವ ಪಡೆದುಕೊಂಡಿದೆ.
ಸಿ.ಎಸ್.ಪುಟ್ಟರಾಜು ಹೇಳಿಕೆ:ಸಚಿವಪ್ರಿಯಾಂಕ್ ಖರ್ಗೆ ಕಲಿಯುವುದು ಬಹಳ ಇದೆ. ಹಗುರ ಮಾತುಗಳು ಬೇಡ ಎಂದು ರೆಸಾರ್ಟ್ ಸಮೀಪ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಹೇಳಿದರು.