ಚಿಕ್ಕಮಗಳೂರು:"ಹಸಿದು ಹಲಸು ತಿನ್ನು, ಉಂಡು ಮಾವು ತಿನ್ನು" ಎಂಬ ಗಾದೆ ಮಾತು ರೂಢಿಯಲ್ಲಿದೆ. ಎಲ್ಲಾ ವರ್ಗದ ಜನರಿಗೆ ಇಷ್ಟವಾಗುವ ಹಲಸಿನ ಹಣ್ಣನ್ನು ರಾಜ್ಯದ ಅನೇಕ ಭಾಗಗಳಲ್ಲಿ ಬೆಳೆಯಲಾಗುತ್ತದೆ. ಆದರೆ ಜಿಲ್ಲೆಯ ಸಖಾರಾಯಪಟ್ಟಣದ ಹಲಸಿನ ಹಣ್ಣಿಗೆ ಮಾತ್ರ ಎಲ್ಲಿಲ್ಲದ ಬೇಡಿಕೆ ಇದೆ.
ಸಖಾರಾಯ ಪಟ್ಟಣದಲ್ಲೀಗ ಹಲಸಿನ ಸುಗ್ಗಿ ಆರಂಭಗೊಂಡಿದ್ದು, ರಸ್ತೆಯ ಉದ್ದಗಲಕ್ಕೂ ಹಲಸಿನ ಹಣ್ಣುಗಳು ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿದೆ. ಇಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿರುವ ಅಡಿಕೆ ತೋಟದ ಬದಿಗಳಲ್ಲಿ ಹಲಸನ್ನು ಬೆಳೆಯಲಾಗುತ್ತದೆ. ಇಲ್ಲಿನ ಬೆಳೆಗಾರರು ವರ್ಷದಲ್ಲಿ ಮೂರು ತಿಂಗಳ ಕಾಲ ಹಲಸನ್ನು ಉಪ ಬೆಳೆಯಾಗಿ ಬೆಳೆಯುತ್ತಿದ್ದಾರೆ.
ಹಲಸಿನಲ್ಲಿ ಚಂದ್ರ ಬೊಕ್ಕೆ, ರುದ್ರಾಕ್ಷಿ ಬೊಕ್ಕೆ, ಇಂಬ ಹಲಸು, ನಾಟಿ ಹಲಸು ಎಂಬ ವಿವಿಧ ಬಗೆಗಳಿದ್ದು, ಸಖಾರಾಯಪಟ್ಟಣದಲ್ಲಿ ಚಂದ್ರಬೊಕ್ಕೆ ಹಾಗೂ ರುದ್ರಾಕ್ಷಿ ಬೊಕ್ಕೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಇವು ಸಕ್ಕರೆಯಷ್ಟು ಸಿಹಿಯಾಗಿದ್ದು ತಿನ್ನಲು ರುಚಿಯಾಗಿರುವುದರಿಂದ ಎಲ್ಲರನ್ನು ಸೆಳೆಯುತ್ತಿವೆ.
ಸಖಾರಾಯ ಪಟ್ಟಣದಲ್ಲಿ ಮಾರಾಟಕ್ಕಿಟ್ಟಿರುವ ಹಲಸಿನ ಹಣ್ಣು ಕಡೂರಿನಿಂದ ಚಿಕ್ಕಮಗಳೂರಿಗೆ ಹಾದು ಹೋಗುವ ಸಖಾರಾಯಪಟ್ಟಣದ ರಸ್ತೆಯ ಇಕ್ಕೆಲಗಳಲ್ಲಿಯೂ ಹಲಸಿನ ಹಣ್ಣನ್ನು ಮಾರಾಟ ಮಾಡಲಾಗುತ್ತದೆ. ಇನ್ನೂ ಕೆಲವೆಡೆ ಹಣ್ಣಿನ ತೊಳೆ ತೆಗೆದು ಮಾರಾಟ ಮಾಡುತ್ತಾರೆ. ಇಲ್ಲಿನ ರಾಜ್ಯ ಹೆದ್ದಾರಿಯಲ್ಲಿ ಸಾಗುವ ಪ್ರವಾಸಿಗರು ಹಲಸಿನ ಹಣ್ಣಿನ ರುಚಿಯನ್ನು ಸವಿದೇ ಮುಂದೆ ಸಾಗುತ್ತಾರೆ.
ಆದರೆ ಇದಕ್ಕೆ ಇಷ್ಟೊಂದು ಬೇಡಿಕೆ ಇರಬೇಕಾದರೆ ಹಲಸಿನ ಹಣ್ಣಿನ ಮಾರಾಟಕ್ಕೆ ಸೂಕ್ತವಾದ ಮಾರುಕಟ್ಟೆ ಒದಗಿಸಿಕೊಟ್ಟರೆ ದೇಶಾದ್ಯಂತ ಸಖಾರಾಯಪಟ್ಟಣದ ಹಣ್ಣು ಪ್ರಖ್ಯಾತಿ ಪಡೆಯುತ್ತದೆ ಎಂಬುದು ಇಲ್ಲಿ ರೈತರ ಒತ್ತಾಸೆಯಾಗಿದೆ.