ಚಿಕ್ಕಮಗಳೂರು: ಕರ್ನಾಟಕದ ಐದು ಹುಲಿ ಸಂರಕ್ಷಿತಾ ಪ್ರದೇಶಗಳಲ್ಲಿ ವರ್ಷದಿಂದ ವರ್ಷಕ್ಕೆ ಹುಲಿಗಳ ಸಂತತಿಯಲ್ಲಿ ಗಣನೀಯವಾಗಿ ಏರಿಕೆ ಕಂಡುಬರುತ್ತಿದೆ.
ರಾಜ್ಯದಲ್ಲಿ ಹುಲಿ ಸಂತತಿ ಏರಿಕೆ ಕುರಿತು ಉಲ್ಲಾಸ್ ಕಾರಂತ್ ಅವರು 1986ರಿಂದಲೇ ವೈಜ್ಞಾನಿಕವಾಗಿ ಸಂಶೋಧನೆ ಪ್ರಾರಂಭ ಮಾಡಿದ್ದಾರೆ. ಇವರ ಸಂಶೋಧನೆಯಿಂದ ಹುಲಿಗಳ ಸಂತತಿ ಏರಿಕೆ ಬಗ್ಗೆ ಸರಿಯಾಗಿ ತಿಳಿದುಕೊಳ್ಳಲು ಸಹಕಾರಿ ಆಗಿದೆ. ಸಂಶೋಧನೆ ಪ್ರಕಾರ ಚಿಕ್ಕ ಪ್ರಾಣಿಗಳ ಹೆಚ್ಚಳದಿಂದ ಇವುಗಳ ಸಂತತಿ ಅಧಿಕವಾಗಿವೆ ಎಂದು ತಿಳಿದು ಬಂದಿದೆ.
1986ಕ್ಕೂ ಮುಂಚೆ 86 ಹುಲಿಗಳು ಕಂಡು ಬಂದಿದ್ದವು. ನಂತರ ನಿರಂತರ ಸಂಶೋಧನೆಯ ಪ್ರಕಾರ, ಇಲ್ಲಿಯವರೆಗೂ 371 ಹುಲಿಗಳು ಕಂಡು ಬಂದಿದ್ದು, ಜಿಲ್ಲೆಯ ಭದ್ರಾ ಅಭಯಾರಣ್ಯದಲ್ಲಿ 37ರಿಂದ 42 ಹುಲಿಗಳು ಕಂಡು ಬರುತ್ತಿವೆ ಎಂದು ಜಿಲ್ಲೆಯ ಅರಣ್ಯದ ಇಲಾಖೆಯಿಂದ ಮಾಹಿತಿ ಲಭಿಸಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ರಕ್ಷಿತಾರಣ್ಯ ಹಾಗೂ ಅಭಯಾರಣ್ಯ, ಹುಲಿ ಸಂರಕ್ಷಣಾ ಕೇಂದ್ರ ಇರುವುದರಿಂದಲೂ ಹುಲಿಗಳ ಸಂತತಿ ಹೆಚ್ಚಳಕ್ಕೆ ಕಾರಣವಾಗಿದೆ. ಇಲ್ಲಿನ ನೈಸರ್ಗಿಕ ಬೆಟ್ಟಗಳು ಹಾಗೂ ಅರಣ್ಯಗಳು ಇವುಗಳ ಬೆಳವಣಿಗೆಗೆ ಪೂರಕವಾಗಿದೆ ಎಂದು ತಿಳಿದು ಬಂದಿದೆ.