ಚಿಕ್ಕಮಗಳೂರು:ಜಿಲ್ಲೆಯ ಪ್ರವಾಸಿ ತಾಣಗಳು ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಬರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿರುವುದು ಇಲ್ಲಿನ ಜನರಿಗೆ ಕೊರೊನಾ ವಕ್ಕರಿಸುವ ಆತಂಕ ಉಂಟಾಗಿದೆ.
ಕಾಫಿನಾಡಿಗೆ ಹರಿದು ಬರ್ತಿದೆ ಪ್ರವಾಸಿಗರ ದಂಡು... ಜಿಲ್ಲೆಯ ಜನರಲ್ಲಿ ಹೆಚ್ಚಿದ ಆತಂಕ - ಚಿಕ್ಕಮಗಳೂರು ಕೊರೊನಾ ಆತಂಕ
ಮುಂಗಾರು ಆಗಮಿಸುತ್ತಿದ್ದಂತೆ ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಾಗುತ್ತದೆ. ಆದರಂತೆ ಈ ವರ್ಷ ಕೂಡ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಸ್ಥಳೀಯ ಜನರಿಗೆ ಕೊರೊನಾ ಆತಂಕ ಎದುರಾಗಿದೆ.
ಮೂಡಿಗೆರೆ ತಾಲೂಕಿನ ಮಧುಗುಂಡಿ, ರಾಣಿ ಝರಿ, ದೇವರಮನೆ, ಶಿಶಿಲ ಗುಡ್ಡ, ಚಾರ್ಮಾಡಿ ಘಾಟ್, ಬಲಿಗೆ, ಸುಂಕಸಾಲೆ ಗ್ರಾಮಗಳ ವ್ಯಾಪ್ತಿಯ ಪ್ರವಾಸಿ ತಾಣಗಳಿಗೆ ಆಗಮಿಸುವ ಸಾವಿರಾರು ಪ್ರವಾಸಿಗರು, ಸ್ಥಳೀಯ ಹೋಂ ಸ್ಟೇ, ರೆಸಾರ್ಟ್ಗಳಲ್ಲಿ ಉಳಿದು ಹೋಗುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಪ್ರವಾಸಿ ತಾಣಗಳಲ್ಲಿನ ಸುತ್ತಮುತ್ತಲಿನ ಜನರು ಜಿಲ್ಲೆಯಲ್ಲಿ 3 ತಿಂಗಳ ಕಾಲ ಪ್ರವಾಸೋದ್ಯಮ ಬಂದ್ ಮಾಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಎಲ್ಲಾ ಪ್ರವಾಸಿ ತಾಣಗಳು, ಹೋಂ ಸ್ಟೇ, ರೆಸಾರ್ಟ್ಗಳು ಪ್ರವಾಸಿಗರಿಗೆ ಮುಕ್ತವಾಗಿರುವುದರಿಂದ ಸಹಜವಾಗಿಯೇ ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಹೀಗಾಗಿ ಕೂಡಲೇ ಪ್ರವಾಸಿಗರಿಗೆ ನಿರ್ಬಂಧ ಹೇರಬೇಕು. ಇಲ್ಲದಿದ್ದರೆ, ನಾವೇ ಪ್ರವಾಸಿಗರನ್ನು ನಿರ್ಬಂಧ ಮಾಡುತ್ತೇವೆ ಎಂದಿದ್ದಾರೆ ಇಲ್ಲಿನ ಜನ.