ಚಿಕ್ಕಮಗಳೂರು:ಪೋಷಕರ ಆಂಗ್ಲ ಮಾಧ್ಯಮದ ಮೇಲಿನ ವ್ಯಾಮೋಹವೋ, ಖಾಸಗಿ ಶಾಲೆಗಳಿಗೆ ಸರ್ಕಾರಿ ಶಾಲೆಗಳು ಪೈಪೋಟಿ ನೀಡಲು ಸಾಧ್ಯವಾಗುತ್ತಿಲ್ಲವೋ ಅಥವಾ ಸರ್ಕಾರ ಕೇಳಿದವರಿಗೆಲ್ಲ ಖಾಸಗಿ ಶಾಲೆಗಳಿಗೆ ಅನುಮತಿ ನೀಡುತ್ತಿರುವ ಕಾರಣವೋ ಗೊತ್ತಿಲ್ಲ. ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳಿಗೆ ಮಾತ್ರ ಬೀಗ ಬೀಳ್ತಾನೆ ಇದೆ. ಮಕ್ಕಳಿಗೆ ಬಿಸಿಯೂಟ, ಹಾಲು, ಮೊಟ್ಟೆ, ಸೈಕಲ್ ಅಂತೆಲ್ಲಾ ವಿವಿಧ ಯೋಜನೆಗಳನ್ನು ಜಾರಿಗೆ ತಂದರೂ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ. ಕಾಫಿನಾಡಲ್ಲಿ 2023ರ ಒಂದೇ ವರ್ಷ 21 ಸರ್ಕಾರಿ ಶಾಲೆಗಳಿಗೆ ಬೀಗ ಬಿದ್ದಿದೆ.
ಹೌದು, ಈ ಒಂದೇ ವರ್ಷದಲ್ಲಿ ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ 21 ಕನ್ನಡ ಶಾಲೆಗಳು ಬಂದ್ ಆಗಿವೆ. ಸರ್ಕಾರ ಮಧ್ಯಾಹ್ನದ ಬಿಸಿಯೂಟ, ಮೊಟ್ಟೆ-ಹಾಲು, ಶೂ-ಸಾಕ್ಸ್ ಅಂತೆಲ್ಲಾ ಹತ್ತಾರು ಯೋಜನೆಗಳನ್ನು ಜಾರಿಗೆ ತಂದರು ಸಹ, ಹೆತ್ತವರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಮೂಗು ಮುರಿಯುತ್ತಿದ್ದಾರೆ. ಇದರಿಂದ ಕಾಫಿನಾಡಲ್ಲಿ ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳಿಗೆ ಬೀಗ ಬೀಳುತ್ತಿರುವ ಪ್ರಮಾಣ ಕೂಡ ಹೆಚ್ಚಿದೆ.
ಜನರಿಗೆ ಸರ್ಕಾರದ ಎಲ್ಲಾ ಸೌಲಭ್ಯ ಬೇಕು. ಅಕ್ಕಿ, ಬಸ್ಸು, ಕರೆಂಟ್, ದುಡ್ಡು ಎಲ್ಲಾ ಬೇಕು. ಆದರೆ, ಸರ್ಕಾರಿ ಶಾಲೆ ಮಾತ್ರ ಬೇಡ. ಖಾಸಗಿ ಹಾಗೂ ಆಂಗ್ಲ ಮಾಧ್ಯಮದಲ್ಲಿ ಮಕ್ಕಳು ಓದುತ್ತಿದ್ದಾರೆ ಅಂದರೆ ಹೆತ್ತವರಿಗೆ ಡಿಗ್ನಿಟಿ. ಪೋಷಕರು ತಮ್ಮ ಘನತೆಗಾಗಿ ಸರ್ಕಾರಿ ಶಾಲೆಗಳಿಗೆ ಬೀಗ ಹಾಕಿಸುತ್ತಿದ್ದಾರೆ ಎಂಬುದು ಕೆಲ ಕನ್ನಡ ಪರ ಹೋರಾಟಗಾರರ ಮಾತಾಗಿದೆ.