ಚಿಕ್ಕಮಗಳೂರು : ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರೂ ಜಿಲ್ಲೆಯ ಹಳ್ಳಿಯ ಮಂದಿ ಸರಿಯಾದ ರಸ್ತೆ ವ್ಯವಸ್ಥೆಯಿಲ್ಲದೆ ಹಳ್ಳದ ದಾರಿ ಅವಲಂಬಿಸಿ ಪರದಾಡುತ್ತಿದ್ದಾರೆ.
ಮೂಡಿಗೆರೆ ತಾಲೂಕಿನ ಕಣತಿ ಸಮೀಪದ ಐದಳ್ಳಿ ಗ್ರಾಮಸ್ಥರು ಕಳೆದ ಏಳೆಂಟು ದಶಕಗಳಿಂದ ಒಂದೇ ಒಂದು ಸೇತುವೆಗಾಗಿ ಜನನಾಯಕರು ಹಾಗೂ ಅಧಿಕಾರಿಗಳಿಗೆ ಪರಿಪರಿಯಾಗಿ ಮನವಿ ಮಾಡಿದರೂ ಎಳ್ಳಷ್ಟೂ ಪ್ರಯೋಜನವಾಗಿಲ್ಲ.
ಸರಿಯಾದ ಮಾರ್ಗವಿಲ್ಲದೆ ಪರದಾಡುತ್ತಿರುವ 'ಐದಳ್ಳಿ'ಗರು ಐದಳ್ಳಿ ಗ್ರಾಮದಿಂದ ಅರೆನೂರು, ಬೆಟ್ಟದಹಳ್ಳಿ ಹಾಗೂ ದುರ್ಗ ಗ್ರಾಮಕ್ಕೆ ಸಂಪರ್ಕವಿದೆ. ಐದಳ್ಳಿಯಲ್ಲಿ ಸುಮಾರು 30-35 ಮನೆಗಳಿವೆ. ಕಣತಿ ಕೇವಲ ಅರ್ಧ-ಮುಕ್ಕಾಲು ಕಿ.ಮೀ. ಐದಳ್ಳಿ ಜನ ಕಣತಿಗೆ ಬರಬೇಕಂದ್ರೆ ಐದಾರು ಕಿ.ಮೀ. ಸುತ್ತಿ ಬರಬೇಕು. ಈ ಆನೆ ಬಿದ್ದ ಹಳ್ಳಕ್ಕೆ ಸೇತುವೆ ನಿರ್ಮಾಣವಾದರೆ ಅರ್ಧ ಕಿ.ಮೀನಲ್ಲಿ ಕಣತಿ ಗ್ರಾಮಕ್ಕೆ ಬರುತ್ತಾರೆ.
ಆದರೆ, ಏಳು ದಶಕಗಳಿಂದ ಇವ್ರಿಗೆ ಸೇತುವೆ ನಿರ್ಮಿಸಿಕೊಡಲು ಅಧಿಕಾರಿಗಳು-ರಾಜಕಾರಣಿಗಳು ಅಂಗೈಯಲ್ಲಿ ಆಕಾಶ ತೋರಿಸಿದ್ದಾರೆ. ಈ ಗ್ರಾಮದ ಮಕ್ಕಳು ಮಳೆಗಾಲದಲ್ಲಿ ಮೂರ್ನಾಲ್ಕು ತಿಂಗಳು ಶಾಲೆಗೆ ಹೋಗಲ್ಲ. ಯಾರಿಗಾದರೂ ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಕರೆದೊಯ್ಯಬೇಕೆಂದರೆ ಜೋಳಿಗೆ ಕಟ್ಟಿಕೊಂಡು ಹೊತ್ಕೊಂಡು ಹೋಗಬೇಕು. ಪ್ರತಿನಿತ್ಯ ಈ ಭಾಗದ ಜನರು ಸಮಸ್ಯೆಯಲ್ಲಿಯೇ ಜೀವನ ಕಳೆಯುವಂತಾಗಿದೆ.