ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು: ಪ್ರತಿನಿತ್ಯ ಒಂದೊಂದು ಪವಾಡ ಮಾಡುತ್ತಿರುವ ಹುತ್ತದ ಕೆಂಪಮ್ಮ - ಈಟಿವಿ ಭಾರತ್ ಕನ್ನಡ ಸುದ್ದಿ

ಕಡೂರು ತಾಲೂಕಿನ ಕುಂದೂರು ಗ್ರಾಮದಲ್ಲಿ ನೆಲೆಸಿರುವ ಕೆಂಪಮ್ಮ ದೇವಿಯ ಪವಾಡಕ್ಕೆ ಭಕ್ತರು ಆಶ್ಚರ್ಯಚಕಿತರಾಗಿದ್ದಾರೆ.

ಕೆಂಪಮ್ಮ ದೇವಿ
ಕೆಂಪಮ್ಮ ದೇವಿ

By ETV Bharat Karnataka Team

Published : Aug 29, 2023, 9:45 PM IST

ಅರ್ಚಕ ನೀಲಕಂಠಪ್ಪ ಹುತ್ತದ ಕೆಂಪಮ್ಮ ದೇವಿಯ ಪವಾಡದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ

ಚಿಕ್ಕಮಗಳೂರು :ಆಕೆ ನಂಬಿದ ಸಹಸ್ರಾರು ಭಕ್ತರ ಪಾಲಿನ ಆರಾಧ್ಯ ಧೈವ. ಆಕೆಯ ಒಂದೊಂದು ಪವಾಡವನ್ನು ಕಣ್ಣಾರೆ ಕಂಡ ಭಕ್ತರು ಉಘೇ ಕೆಂಪಮ್ಮ ಅಂತ ತಲೆದೂಗಿದ್ರು. ದಶಕಗಳಿಗೊಮ್ಮೆ ಆ ಸೃಷ್ಠಿಕರ್ತೆಗೂ ಹುತ್ತ ಆವರಿಸಿಕೊಳ್ಳುತ್ತಿತ್ತು. ಹೇಗಂದ್ರೆ, ಕಲ್ಲಿನ ದೇವಸ್ಥಾನದಲ್ಲಿ ಎಲ್ಲಿಂದ ಹುತ್ತ ಬರುತ್ತಿತ್ತು ಅನ್ನೋದು ಗೊತ್ತಿಲ್ಲ. ಆದ್ರೆ, ನೋಡ-ನೋಡ್ತಿದ್ದಂತೆ ಆಕೆ ಮೈತುಂಬ ಹುತ್ತ ಆವರಿಸಿಕೊಳ್ಳುತ್ತಿತ್ತು. ಗರ್ಭಗುಡಿಯ ಮೂರ್ತಿಯನ್ನೇ ಆವರಿಸೋ ಹುತ್ತದ ಮಹಿಮೆ ನಿಜಕ್ಕೂ ಕೌತುಕ. ದಶಕಗಳ ಬಳಿಕ ಅಚ್ಚರಿಗೆ ಸಾಕ್ಷಿಯಾಯ್ತು ಕಾಫಿನಾಡ ಆ ದೇವಿ ದೇಗುಲ.

ಹೌದು, ಶಕ್ತಿ ರೂಪಿಣಿ.. ಕಾತ್ಯಾಯಿಣಿ.. ವಿಶ್ವ ರೂಪಿಣಿ.. ಹೀಗೆ ಹತ್ತು ಹಲವು ಹೆಸರುಗಳಿಂದ ಕರೆಸಿಕೊಳ್ಳೋವ ದೇವತೆಗಳ ಪೈಕಿ ಚಾಮುಂಡಿ ತಾಯಿ ನಾಡಿನ ಅಧಿದೇವತೆ. ಅದರ ಮತ್ತೊಂದು ರೂಪವೇ ಕಾಫಿನಾಡ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಕುಂದೂರು ಗ್ರಾಮದಲ್ಲಿ ನೆಲೆಸಿರೋ ಕೆಂಪಮ್ಮ ದೇವಿ. ನೂರಾರು ವರ್ಷಗಳಿಂದ ಉಗ್ರ ರೂಪಿಯಂತೆ ಈ ಗ್ರಾಮದಲ್ಲಿ ನೆಲೆಸಿರುವ ಕೆಂಪಮ್ಮ ದೇವಿಯ ಅಚ್ಚರಿ ಪವಾಡಗಳಿಗೆ ಸಹಸ್ರಾರು ಭಕ್ತರು ಆಶ್ಚರ್ಯ ಚಕಿತರಾಗಿದ್ದಾರೆ.

ಭಕ್ತರಾದ ಮಂಜುಳಾ ದೇವಿಯ ಪವಾಡದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ

ಇಂಥ ಅಚ್ಚರಿ ವಿಸ್ಮಯಕ್ಕೆ ಕಾರಣ, ಕೆಂಪಮ್ಮ ದೇವಿಯ ಗರ್ಭ ಗುಡಿಯ ಮೂರ್ತಿಯನ್ನೇ ಹುತ್ತ ಸಂಪೂರ್ಣ ಆವರಿಸುವುದು. ಹುತ್ತ ಆವರಿಸಿತು ಅಂದ್ರೆ ಕೆಂಪಮ್ಮನ ಮೂರ್ತಿಯನ್ನೇ ವಿಸರ್ಜಿಸುವ ಕಾಲ ಬಂತು ಅಂತ ಅರ್ಥ. ಇದೀಗ ಆ ಘಳಿಗೆ ಕೂಡಿ ಬಂದಿದ್ದು, ಬರೋಬ್ಬರಿ 10 ವರ್ಷಗಳ ಬಳಿಕ ಈ ಅಧಿದೇವತೆಯ ಮೈಮೇಲೆ ಸಂಪೂರ್ಣ ಆವರಿಸಿದ್ದ ಹುತ್ತವನ್ನು ತೆರವುಗೊಳಿಸಿ, ಕೆಂಪಮ್ಮನ ಮೂರ್ತಿಯನ್ನು ವಿಸರ್ಜನೆ ಮಾಡುತ್ತಾರೆ. ಜಿಲ್ಲೆ ಸೇರಿದಂತೆ ನಾಡಿನಾದ್ಯಂತ ತನ್ನ ಪವಾಡಗಳಿಂದಲೇ ಹೆಸರು ಪಡೆದಿರೋ ಕುಂದೂರು ಗ್ರಾಮದ ದೇವಿಯ ಮೂರ್ತಿಯ ವಿಸರ್ಜನಾ ಕಾರ್ಯ ಗ್ರಾಮದಾದ್ಯಂತ ಸಂಭ್ರಮ-ಸಡಗರದಿಂದ ನಡೆದಿದೆ.

ಇನ್ನು, ಐತಿಹಾಸಿಕ ಪುರಾಣದ ಮಾಹಿತಿ ಪ್ರಕಾರ, ನೂರಾರು ವರ್ಷಗಳ ಹಿಂದೆ ದಟ್ಟ ಕಾನನವಾಗಿದ್ದ ಈ ಗ್ರಾಮದಲ್ಲಿ ನಿತ್ಯವೂ ಹಸು ಒಂದು ಹುತ್ತಕ್ಕೆ ಹಾಲೆರೆದು ಹೋಗುತ್ತಿದ್ದುದನ್ನು ಕಂಡ ಗ್ರಾಮಸ್ಥರು, ದೈವ ಪಂಡಿತರ ಬಳಿ ಘಟನೆ ವಿವರಿಸಿದಾಗ, ಇಲ್ಲಿ ಕೆಂಪಮ್ಮ ದೇವಿ ನೆಲೆಸಿದ್ದಾಳೆ ಅಂದಿದ್ರಂತೆ. ಅಂದಿನಿಂದ ಶುರುವಾದ ಕೆಂಪಮ್ಮ ದೇವಿಯ ವಿಗ್ರಹ ಆರಾಧನೆ ಇಂದಿಗೂ ಮುಂದುವರೆದಿದೆ. ಅಚ್ಚರಿ ಅಂದ್ರೆ 20 ವರ್ಷಗಳಿಗೊಮ್ಮೆ, ಕೆಲವೊಮ್ಮೆ 10 ವರ್ಷಗಳಿಗೆ ದೇವಿಯ ಹಣೆ ತನಕವು ಹುತ್ತದ ಮಣ್ಣು ಸಂಪೂರ್ಣ ಆವರಿಸಿದ ದೃಶ್ಯ ಕಣ್ತುಂಬಿಕೊಳ್ಳಲು ಜಿಲ್ಲೆ ಸೇರಿದಂತೆ ರಾಜ್ಯ-ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ. ಹತ್ತು ವರ್ಷಗಳ ಹಿಂದೆ ಇಡೀ ಮೂರ್ತಿಯನ್ನು ಆವರಿಸಿದ್ದ ಹುತ್ತ ಇದೀಗ ಮತ್ತೆ ಸಂಪೂರ್ಣ ಆವರಿಸಿದ್ದು, ದೇವಿಯ ವಿಸರ್ಜನಾ ಕಾರ್ಯ ಅದ್ಧೂರಿಯಾಗಿ ನಡೆಯಿತು. ಭಕ್ತರ ನಂಬಿಕೆ ಹಾಗೂ ದೇವಿಯ ಆಜ್ಞೆಯಂತೆ ಕಲ್ಲಿನ ಮೂರ್ತಿಯನ್ನು ಮಾಡಲು ಗ್ರಾಮಸ್ಥರು ನಿರ್ಧರಿಸಿದ್ದು, ಕೆಲವೇ ದಿನಗಳಲ್ಲಿ ಮತ್ತೊಂದು ಅಚ್ಚರಿಗೆ ಸಾಕ್ಷಿಯಾಗಲಿದ್ದಾಳೆ ಈ ದೇವಿ.

ಒಟ್ಟಾರೆಯಾಗಿ ದೇವರು ಅಂದ್ರೆನೆ ಒಂದು ಶಕ್ತಿ. ದೈವದ ಒಂದೊಂದು ಪವಾಡ ಹೊರ ಬಂದಾಗಲೂ ಭಕ್ತವೃಂದ ಕೈ ಮುಗಿದು ಉಘೇ ಅನ್ನುತ್ತೆ. ಹುತ್ತದ ಕೆಂಪಮ್ಮ ಕೂಡ ಗರ್ಭ ಗುಡಿಯಲ್ಲಿ ಕೂತು ಪವಾಡಗಳಿಗೆ ಸಾಕ್ಷಿಯಾಗುತ್ತಿದ್ದಾಳೆ. ಭಕ್ತರ ಕಷ್ಟ-ಕೋಟಲೆ, ನೋವುಗಳಿಗೆ ನೆರವಾಗುತ್ತ, ಹುತ್ತದ ಕೆಂಪಮ್ಮ ಎಂದೇ ನಾಡಿನಾದ್ಯಂತ ಪ್ರಸಿದ್ಧಿ ಪಡೆದಿರುವ ಕುಂದೂರು ಕೆಂಪಮ್ಮ ದೇವಿಯ ವಿಸ್ಮಯ ಅಚ್ಚರಿಗೆ ಸಾವಿರಾರು ಭಕ್ತರು ಸಾಕ್ಷಿಯಾಗಿದ್ದಾರೆ.

ಇದನ್ನೂ ಓದಿ:ದೇವಿಯ ಮೈ ಮೇಲೆ ಬೆಳೆಯುತ್ತಿರುವ ಹುತ್ತ: ಅಪರೂಪದ ಘಟನೆಗೆ ಸಾಕ್ಷಿಯಾದ ಕುಂದೂರು ಗ್ರಾಮ

ABOUT THE AUTHOR

...view details