ಚಿಕ್ಕಮಗಳೂರು : ಪತ್ನಿಯ ಕಾಟಕ್ಕೆ ಬೇಸತ್ತು ಪತಿ ತೋಟದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಅರವಿಂದ್ (42) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಯ ಸಂಬಂಧ ಡೆತ್ ನೋಟ್ ಪತ್ತೆಯಾಗಿದ್ದು, ಡೆತ್ ನೋಟಿನಲ್ಲಿ ಪತ್ನಿ ಹಾಗೂ ಪೊಲೀಸ್ ಠಾಣಾಧಿಕಾರಿ ಹೆಸರು ಬರೆದಿಟ್ಟು, ಅರವಿಂದ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೃತ ಅರವಿಂದ ಹಾಗೂ ರೇಖಾರಿಗೆ 12 ವರ್ಷಗಳ ಹಿಂದೆ ವಿವಾಹವಾಗಿದ್ದು, ಈ ಜೋಡಿಗೆ ಓರ್ವ ಪುತ್ರ ಹಾಗೂ ಪುತ್ರಿ ಇದ್ದಾರೆ. ದಂಪತಿಯ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು ಎನ್ನಲಾಗ್ತಿದೆ. ಕಳೆದ 2 ನೇ ತಾರೀಕು ಅರವಿಂದ್ ಪತ್ನಿ ರೇಖಾ ಜಯಪುರ ಪೊಲೀಸ್ ಠಾಣೆಗೆ ಪತಿ ಅರವಿಂದ ಹಾಗೂ ಅತ್ತೆ, ಮಾವನ ವಿರುದ್ದ ದೂರು ನೀಡಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್ ನಲ್ಲಿ ಮೃತ ಅರವಿಂದ ಬರೆದಿದ್ದಾರೆ. 'ಜಯಪುರ ಪೊಲೀಸ್ ಠಾಣೆಯ ಠಾಣಾಧಿಕಾರಿ ಸರಿಯಾದ ತನಿಖೆ ನಡೆಸದೆ, ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಜಯಪುರದಲ್ಲಿ ಮನೆ ಮಾಡುವಂತೆ ನನಗೆ ಸೂಚಿಸಿದ್ದಾರೆ. ಇದರಿಂದ ನನ್ನ ವಯಸ್ಸಾದ ತಂದೆ ತಾಯಿಯನ್ನು ನೋಡಿಕೊಳ್ಳಲು ಸಾಧ್ಯವಾಗದು. ಹೀಗೆ ಸಾಕಿ ಸಲುಹಿದ ತಂದೆ ತಾಯಿಯನ್ನು ನೋಡಿಕೊಳ್ಳಲು ಸಾಧ್ಯವಾಗದೇ ನಾನು ಬದುಕಿ ಪ್ರತಿದಿನ ಸಾಯುವ ಬದಲು ಒಮ್ಮೆಗೆ ಸಾಯುತ್ತೇನೆ' ಎಂದು ಅರವಿಂದ್ ಡೆತ್ ನೋಟ್ ನಲ್ಲಿ ಬರೆದಿದ್ದಾರೆ.