ಚಿಕ್ಕಮಗಳೂರು : ದತ್ತ ಜಯಂತಿ ಪ್ರಯುಕ್ತ ದತ್ತ ಮಾಲಾಧಾರಿಗಳು ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮೂಡಿಗೆರೆ ಪಟ್ಟಣದಲ್ಲಿ ಶನಿವಾರ ರಾತ್ರಿ ಶೋಭಾಯಾತ್ರೆ ಹಮ್ಮಿಕೊಂಡಿದ್ದರು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿದ ಮಾಲಾಧಾರಿಗಳು, ನಂತರ ಅಡ್ಯಂತಾಯ ರಂಗಮಂದಿರದಲ್ಲಿ ಧಾರ್ಮಿಕ ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ವಾಗ್ಮಿ ಹಾರಿಕಾ ಮಂಜುನಾಥ್, ಇಡೀ ಜಗತ್ತು ಈಗ ನಮ್ಮತ್ತ ನೋಡುತ್ತಿದೆ. ದತ್ತ ಪೀಠ ವಿಮೋಚನೆಯ ಹಾದಿಯಲ್ಲಿ ನಾವು ಸಾಕಷ್ಟು ದೂರ ನಡೆದುಕೊಂಡು ಬಂದಿದ್ದೇವೆ. ರಾಜಕೀಯ ಕಾರಣಗಳಿಗಾಗಿ ಇನ್ನೂ ನಮ್ಮ ಪೂರ್ಣ ಗುರಿ ತಲುಪಲು ಸಾಧ್ಯವಾಗಿಲ್ಲ. ಯುವಕರು ರಾಜಕೀಯದ ಕೈಗೊಂಬೆಯಾಗದೇ ಸ್ವಾಭಿಮಾನದಿಂದ ದೇಶಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧರಾಗಬೇಕು ಎಂದರು.
ಸಭೆಯಲ್ಲಿ ಹಿಂದೂಪರ ಸಂಘಟನೆಗಳ ಮುಖಂಡರಾದ ಸಾಲುಮರದ ಮಹೇಶ್, ಅಜಿತ್ ಮುಂತಾದವರು ಮಾತನಾಡಿದರು. ವಿವಿಧ ಹಿಂದೂಪರ ಸಂಘಟನೆಗಳ ಮುಖಂಡರು, ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದು ವಿಶೇಷವಾಗಿತ್ತು.
ಶೋಭಾಯಾತ್ರೆ:ಶೋಭಾಯಾತ್ರೆಯು ಮೂಡಿಗೆರೆಯ ಎಂ.ಜಿ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಡಿಜೆ ಹಾಡನ್ನು ನಿಲ್ಲಿಸುವಂತೆ ಪೊಲೀಸರು ಸೂಚಿಸಿದಾಗ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪೊಲೀಸ್ ಅಧಿಕಾರಿ ಶ್ರೀನಿಧಿಯವರು ಡಿಜೆ ಹಾಡು ನಿಲ್ಲಿಸಿ ಎಂದು ಹೇಳಿದ್ದಕ್ಕೆ ಕೆಲ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ಪೊಲೀಸರ ಸೂಚನೆಯನ್ನೂ ಲೆಕ್ಕಿಸದೆ ಮೆರವಣಿಗೆ ಮುಂದುವರೆಯಿತು.
ಇದನ್ನೂ ಓದಿ :ಚಿಕ್ಕಮಗಳೂರು : ದತ್ತಮಾಲಾ ಶೋಭಾಯಾತ್ರೆ ಆರಂಭ, ಬಿಗಿ ಪೊಲೀಸ್ ಬಂದೋಬಸ್ತ್