ಚಿಕ್ಕಮಗಳೂರು: ಮಹಾಮಾರಿ ಕೊರೊನಾ ಸೋಂಕಿನ ಕುರಿತು ಜನತೆಗೆ ನಿರಂತರವಾಗಿ ಜಾಗೃತಿ ಮೂಡಿಸುತ್ತಿರುವ, ಆರೊಗ್ಯ ಇಲಾಖೆ, ಪೊಲೀಸ್ ಇಲಾಖೆ, ಮತ್ತು ಆಶಾ ಕಾರ್ಯಕರ್ತೆಯರು ಸೇರಿದಂತೆ ಸ್ವಯಂ ಸೇವಕರ ಕಾರ್ಯ ಶ್ಲಾಘನೀಯವಾದದ್ದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ ರವಿ ತಿಳಿಸಿದರು.
ಜಿಲ್ಲೆಯ ಕಡೂರು ತಾಲೂಕಿನ ಪಿಳ್ಳೇನಹಳ್ಳಿ ಗ್ರಾಮ ಪಂಚಾಯತ್ ನಲ್ಲಿ ಸ್ಥಳೀಯ ಆಡಳಿತದ ವತಿಯಿಂದ ಅಂಗನವಾಡಿ, ಆಶಾ, ಆರೋಗ್ಯ ಕಾರ್ಯಕರ್ತೆಯರಿಗಾಗಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕೊರೊನಾ ಸೋಂಕು ಕೂಲಿ ಕಾರ್ಮಿಕರಿಂದ ಹಿಡಿದು ದೊಡ್ಡ ಉದ್ದಿಮೆದಾರರವರೆಗೂ ಆರ್ಥಿಕವಾಗಿ ಸಂಕಷ್ಟ ಅನುಭವಿಸುವಂತೆ ಮಾಡಿದೆ. ಆರಂಭದಲ್ಲಿ ಸೋಂಕಿನ ಬಗ್ಗೆ ಯಾವುದೇ ಭಯವಿರಲಿಲ್ಲ, ಆದ್ರೆ ಇಂದು ಸೋಂಕಿನ ಪ್ರಕರಣಗಳು ದಿನೇ-ದಿನೆ ಹೆಚ್ಚಾಗುತ್ತಿದೆ. ಕೊರೊನಾ ಸೋಂಕಿನಿಂದ ದೇಶ ಮುಕ್ತವಾಗಿಲ್ಲ ಎಂಬುದನ್ನು ಅರಿತು ಜನತೆ ಮುನ್ನೆಚ್ಚರಿಕೆ ಕ್ರಮ ವಹಿಸುವುದು ಒಳಿತು ಎಂದು ಹೇಳಿದರು.