ಚಿಕ್ಕಮಗಳೂರು: ಶೋಲಾ ಅರಣ್ಯದ ಮಧ್ಯೆ ಹರಿದು ಬರುವ ಹೊನ್ನಮ್ಮನ ಹಳ್ಳ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಕಾಫಿ ಕಣಿವೆ ಚಿಕ್ಕಮಗಳೂರಂದ್ರೆ ಪ್ರವಾಸಿಗರ ಪಾಲಿನ ಸ್ವರ್ಗ. ಇಲ್ಲಿನ ಅದೆಷ್ಟೋ ಸುಂದರ ತಾಣಗಳಿಗೆ ಪ್ರವಾಸಿಗರು ಮಾರುಹೋಗಿದ್ದಾರೆ. ಕಾಫಿನಾಡಿನ ಸೌಂದರ್ಯಕ್ಕೆ ರಾಜ್ಯ-ಹೊರ ರಾಜ್ಯದ ಮೂಲೆ ಮೂಲೆಗಳಿಂದಲೂ ಪ್ರತಿವರ್ಷ ಸಾವಿರಾರು ಪ್ರವಾಸಿಗರು ಭೇಟಿ ಕೊಟ್ಟು ಕಾಫಿ ತೋಟದೊಳಗಿನ ಪ್ರಕೃತಿ ಸೌಂದರ್ಯ ಸವಿಯುತ್ತಾರೆ.
ಕಾಫಿನಾಡಿನ ಗಿರಿ ಶಿಖರಗಳ ದಾರಿ ಹಿಡಿದಾಗ ಪ್ರವಾಸಿಗರಿಗೆ ಎದುರಾಗೋದು ಹೊನ್ನಮ್ಮನ ಹಳ್ಳ ಪಾಲ್ಸ್. ಗಿಡ ಮೂಲಿಕೆಯ ಸತ್ವವುಳ್ಳ ಈ ನೀರು ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರ ಅಂತಾರೆ ಇಲ್ಲಿಗೆ ಬರುವ ಪ್ರವಾಸಿಗರು. ಈ ಕುರಿತ ವಿಶೇಷ ವರದಿ ಇಲ್ಲಿದೆ.
ಹೌದು.. ಜುಳು ಜುಳು ಹರಿಯೋ ಗಂಗೆ.. ಐಸ್ ವಾಟರ್ನಂತೆ ತಣ್ಣಗೆ ಕೊರೆಯೋ ನೀರು. ಹಾಲ್ನೊರೆಯಂತೆ ಉಕ್ಕುವ ಹೊಳೆಯೋ ಇಲ್ಲಿನ ನೀರಿನ ಗುಣಕ್ಕೆ ಟೂರಿಸ್ಟ್ಗಳು ಇನ್ನಷ್ಟು ಫಿದಾ ಆಗ್ತಾರೆ. ಶೋಲಾ ಅರಣ್ಯದೊಳಗೆ ವರ್ಷದ 365 ದಿನವೂ ಹರಿಯೋ ನೀರು, ದಾರಿಹೋಕರಿಗೆ ಅಲ್ಲಲ್ಲೇ ಖುಷಿ ನೀಡ್ತಾ ಮುಂದಿನ ಹಾದಿ ತೋರಿಸುತ್ತೆ..
ಚಿಕ್ಕಮಗಳೂರಿನಿಂದ ದತ್ತ ಪೀಠಕ್ಕೆ ತೆರಳುವ ಮಾರ್ಗ ಮಧ್ಯೆ ಸಿಗೋ ಈ ಹೊನ್ನಮ್ಮನ ಹಳ್ಳದ ಜಲಪಾತ ಇಲ್ಲಿಗೆ ಬರೋ ಪ್ರವಾಸಿಗರನ್ನ ತನ್ನತ್ತ ಕೈಬೀಸಿ ಕರೆಯುತ್ತೆ. ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ, ಕೆಮ್ಮಣ್ಣುಗುಂಡಿಗೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗರು ಹೊನ್ನಮ್ಮನ ಹಳ್ಳ ಜಲಪಾತಕ್ಕೆ ಭೇಟಿ ನೀಡ್ದೆ ಮುಂದೆ ಸಾಗೋಲ್ಲ. ಮಳೆಗಾಲದಲ್ಲಿ ಕಾಫಿನಾಡಿಗೆ ಬಂದ್ರೆ ಸ್ವರ್ಗ ನೋಡಿದಷ್ಟು ಖುಷಿಯಾಗುತ್ತೆ ಅನ್ನುತ್ತಾರೆ ಪ್ರವಾಸಿಗರು.