ಚಿಕ್ಕಮಗಳೂರು: ಹಿರೇಮಗಳೂರಿನ ಶ್ರೀ ಕೋದಂಡರಾಮಸ್ವಾಮಿ ದೇವಾಲಯದಲ್ಲಿ ಕನ್ನಡವನ್ನು ಉಳಿಸಿ, ಬೆಳೆಸೋದರ ಜೊತೆಗೆ ಕನ್ನಡದ ಮಹತ್ವವನ್ನ ವಿಶ್ವವ್ಯಾಪ್ತಿ ಸಾರುವ ಕೆಲಸ ಮಾತ್ರ ಸದ್ದಿಲ್ಲದೆ ನಡೆಯುತ್ತಿದೆ. ಇಲ್ಲಿ ನಿತ್ಯವೂ ಕನ್ನಡದಲ್ಲಿಯೇ ಪೂಜೆ ನಡೆಯುತ್ತಿದೆ.
ಕಲೆ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಕಾಫಿನಾಡು ಚಿಕ್ಕಮಗಳೂರು ತನ್ನದೇ ಆದ ಚಾಪು ಮೂಡಿಸಿದೆ. ಇಲ್ಲಿಂದ ಐದಾರು ಕಿ.ಮೀ. ದೂರದ ಶ್ರೀ ಕೋದಂಡರಾಮ ಸ್ವಾಮಿ ದೇವಾಲಯದಲ್ಲಿ ಕೋದಂಡರಾಮನಿಗೆ ಕನ್ನಡದಲ್ಲೇ ಪೂಜಾ ಕೈಂಕರ್ಯಗಳನ್ನ ನೆರವೇರಿಸೋ ಮೂಲಕ ಕಾಫಿನಾಡು ತನ್ನದೇ ಆದ ಖ್ಯಾತಿ ಗಳಿಸಿದೆ. ದೇವಾಲಯಗಳಲ್ಲಿ ಸಂಸ್ಕೃತದಲ್ಲಿ ಮಂತ್ರ ಪಠಣ ಮಾಡೋದು ಸಾಮಾನ್ಯ. ಆದರೆ, ಈ ದೇವಾಲಯದ ಅರ್ಚಕರಾಗಿರೋ ಹಿರೇಮಗಳೂರು ಕಣ್ಣನ್, ಕನ್ನಡದಲ್ಲೇ ಮಂತ್ರಗಳನ್ನು ಪಠಿಸುತ್ತಾರೆ.
ಮಲೆನಾಡಿನ ದೇಗುಲದಲ್ಲಿ ಕನ್ನಡ ಮಂತ್ರ.. ಕಣ್ಣನ್ ಅವರ ವಿಶೇಷ ಭಾಷಾ ಪ್ರೇಮ ಹಿರೇಮಗಳೂರಿನ ಈ ದೇವಾಲಯದಲ್ಲಿ ನಿತ್ಯವೂ ಕನ್ನಡದಲ್ಲೇ ಮಂತ್ರ ಪಠಣ, ಹೋಮ, ಹವನ ಕೂಡ ಕನ್ನಡದಲ್ಲೇ. ಮದುವೆಯನ್ನು ಕನ್ನಡದಲ್ಲೇ ಮಾಡೋದು ಇಲ್ಲಿನ ವಿಶೇಷ. ದೇವಾಲಯದೊಳಗಿನ ಗೋಡೆಗಳ ಮೇಲೆಲ್ಲವೂ ಕನ್ನಡಮಯ. ದೇವಾಲಯದ ವಠಾರವೆಲ್ಲವೂ ಸಂಪೂರ್ಣ ಕನ್ನಡಮಯ. ದೇವಾಲಯಕ್ಕೆ ಬರೋ ಭಕ್ತರಿಗೆ ಭಕ್ತಿಯ ಜೊತೆ ಕನ್ನಡ ಹಾಗೂ ಜೀವನದ ಪಾಠಗಳ ಸಂದೇಶವುಳ್ಳ ಬರಹಗಳು ದೇವಾಲಯದ ಗೋಡೆಗಳ ಮೇಲೆಲ್ಲಾ ರಾರಾಜಿಸುತ್ತಿವೆ.
ಈ ಮಧ್ಯೆ ಕೊರೊನಾ ವೈರಸ್ ವಿಶ್ವಕ್ಕೆ ಕಾಲಿಟ್ಟಿದ್ದು, ಇದು ಬೇಗ ಹೋಗಲಿ ಜನರು ನೆಮ್ಮದಿಯಿಂದ ಜೀವನ ಮಾಡುವಂತಾಗಲಿ ಎಂದು ದೇವರ ಬಳಿ ಕನ್ನಡದಲ್ಲಿಯೇ ಅರ್ಚನೆಯನ್ನು ಮಾಡಿದ್ದಾರೆ. ನಾಲ್ಕು ದಶಕಗಳ ಹಿಂದೆ ಚಿಕ್ಕಮಗಳೂರಿನ ಹಿರೇಮಗಳೂರಿಗೆ ಆಗಮಿಸಿದ ಕಣ್ಣನ್ ತಂದೆ, ಕನ್ನಡ ನೆಲದಲ್ಲಿ ಕನ್ನಡವೇ ಕಣ್ಮರೆಯಾಗುತ್ತಿರುವ ಕಾಲದಲ್ಲಿ ಏಕೆ ಕನ್ನಡವನ್ನು ಉಳಿಸಬಾರದೆಂದು ನಿತ್ಯವೂ ಕೋದಂಡರಾಮನಿಗೆ ಕನ್ನಡದಲ್ಲಿ ಪೂಜೆ ಸಲ್ಲಿಸಲು ಪ್ರಾರಂಭಿಸಿದ್ದರು.
ಅಪ್ಪನ ಹಾದಿಯನ್ನೇ ಮೈಗೂಡಿಸಿಕೊಂಡ ಕಣ್ಣನ್ ಕೂಡ ಅಂದಿನಿಂದಲೂ ಕನ್ನಡದಲ್ಲಿ ಪೂಜೆ ನೆರವೇರಿಸುವುದನ್ನು ಅಭ್ಯಾಸ ಮಾಡಿಕೊಂಡು, ಕನ್ನಡದ ನೆಲದಲ್ಲೇ ಕನ್ನಡದ ಉಳಿವಿಗೆ ಶ್ರಮಿಸುತ್ತಿದ್ದಾರೆ. ದೇಶ ವಿದೇಶಗಳಿಂದಲೂ ಇಲ್ಲಿಗೆ ನೂರಾರು ಭಕ್ತರು ಆಗಮಿಸುತ್ತಾರೆ. ವಿಶ್ವದ ನಾನಾ ಭಾಗಗಳಿಂದ ಬರೋ ವಿದೇಶಿಗರಿಗೆ ಸಂಸ್ಕೃತ ಹೇಳಿಕೊಡೋ ಕಣ್ಣನ್, ಕೋದಂಡರಾಮನಿಗೆ ಕನ್ನಡದಲ್ಲೇ ಪೂಜಾ ಕೈಂಕರ್ಯ ನೆರವೇರಿಸುತ್ತಿದ್ದಾರೆ.
ಇಲ್ಲಿಗೆ ಬರೋ ಭಕ್ತರಿಗೆ ಕನ್ನಡ ನಾಡು, ನುಡಿಯ ಬಗ್ಗೆ ಅರಿವೂ ಮೂಡಿಸುವ ಕಾರ್ಯವನ್ನು ಈ ದೇವಾಲಯ ಮಾಡುತ್ತಿದೆ. ಆಂಗ್ಲ ಭಾಷೆಯ ವ್ಯಾಮೋಹದ ನಡುವೆ ಮರೆಯಾಗುತ್ತಿರೋ ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡುತ್ತಿರುವ ಕಣ್ಣನ್ ಅವರ ಭಾಷಾ ಪ್ರೇಮ ನಿಜಕ್ಕೂ ಶ್ಲಾಘನೀಯ.