ಕರ್ನಾಟಕ

karnataka

ETV Bharat / state

ಇದು ಹಿರೇಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ! ಬಡ ಮಕ್ಕಳ ಪೋಷಕರ ಆತಂಕ - District Collector Ramesh

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಲ್ಲಿರುವ ಹಿರೇಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 90 ವರ್ಷ ತುಂಬಿದೆ. ಶಾಲಾ ಕಟ್ಟದ ಕುಸಿದು ಬೀಳುವ ಸ್ಥಿತಿಯಲ್ಲಿದೆ.

Hirebailu Government Higher Primary School, Kalasa Taluk
ಕಳಸ ತಾಲೂಕಿನ ಹಿರೇಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

By

Published : May 26, 2023, 9:34 AM IST

Updated : May 26, 2023, 10:09 AM IST

ಹಿರೇಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ ಕುರಿತು ತಿಳಿಸುತ್ತಿರುವ ಸ್ಥಳೀಯ ಚಂದ್ರು.

ಚಿಕ್ಕಮಗಳೂರು:ಇದು ದುರಸ್ಥಿಯನ್ನೇ ಕಾಣದ 90 ವರ್ಷದಷ್ಟು ಹಳೆಯ ಸರ್ಕಾರಿ ಶಾಲೆ. ಇಲ್ಲಿ ಓದುತ್ತಿರುವ ವಿದ್ಯಾರ್ಥಿಗಳೆಲ್ಲರೂ ಬಡ ಕುಟುಂಬಗಳ ಮಕ್ಕಳೇ. ಹಾಗಾಗಿ, ಬಡವರ ಶಾಲೆಯೆಂದೂ ಕರೆಯಬಹುದೇನೋ!. ಕುಸಿದು ಬೀಳುವ ದುಸ್ಥಿತಿಯಲ್ಲಿರುವ ಈ ಶಾಲೆಯಲ್ಲಿ ಓದುವ ಕೂಲಿಕಾರ್ಮಿಕರ ಮಕ್ಕಳು ತಮ್ಮ ಪ್ರಾಣ ಕೈಯಲ್ಲಿ ಹಿಡಿದಿಟ್ಟುಕೊಂಡು ಆಟ-ಪಾಠದಲ್ಲಿ ನಿರತರಾಗಿದ್ದಾರೆ.

ಒಂದೆಡೆ ಶಾಲಾ ಕಟ್ಟಡಕ್ಕೆ ಪ್ಲಾಸ್ಟಿಕ್ ಕವರ್‌ನ ಆಸರೆ, ಗಾಳಿ-ಮಳೆ ಜೋರಾದರೆ ಕಟ್ಟಡದ ಹಿಂದಿರುವ ಗುಡ್ಡ ಶಾಲೆಯ ಮೇಲೆಯೇ ಬೀಳುವಂತಹ ಪರಿಸ್ಥಿತಿ. ಇನ್ನೊಂದೆಡೆ, ಶಾಲೆಯ ಕಿಟಕಿಯಲ್ಲಿ ಹಾವುಗಳು ಓಡಾಡಬಹುದಾದ ಕಿಂಡಿ. ಶಾಲೆಯ ಗೋಡೆಗೂ-ಕಾಂಪೌಂಡ್‍ಗೂ ಸಂಬಂಧವೇ ಇಲ್ಲವೇನೋ. ಹಾಗಾಗಿ, ಈ ಶಾಲೆಯಲ್ಲಿ ಸಮಸ್ಯೆ ಇಲ್ಲ, ಶಾಲೆಯೇ ಸಮಸ್ಯೆಯ ಸುಳಿಯಲ್ಲಿದೆ ಎಂದು ಹೇಳಬಹುದು. ಅಂದಹಾಗೆ ಇದು ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹಿರೇಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದಯನೀಯ ಚಿತ್ರಣ.

ಸುಮಾರು 90 ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಎಲ್ಲ ವಿದ್ಯಾರ್ಥಿಗಳು ಕೂಡ ಕೂಲಿ ಕಾರ್ಮಿಕರ ಮಕ್ಕಳು. ಬೇಕಾದಷ್ಟು ಪ್ರಮಾಣದಲ್ಲಿ ಪಾಠ ಮಾಡಲು ಶಿಕ್ಷಕರು ಇಲ್ಲ. ಮಂಜೂರಾಗಿರುವ ಐವರು ಶಿಕ್ಷಕರಲ್ಲಿ 5 ಹುದ್ದೆಯೂ ಖಾಲಿಯೇ ಇದೆ. ನಿಯೋಜನೆಗೊಂಡ ಶಿಕ್ಷಕರೊಬ್ಬರು ಎರಡೆರಡು ಶಾಲೆಯನ್ನು ನಿರ್ವಹಣೆ ಮಾಡುತ್ತಿದ್ದಾರೆ. ಇದೊಂದು ರೀತಿಯಲ್ಲಿ ಅವರಿಗೆ ಸಾಹಸ.

9 ದಶಕಗಳಷ್ಟು ಇತಿಹಾಸವಿರುವ ಈ ಶಾಲೆ ಇವತ್ತೋ ನಾಳೆಯೋ ಬಿದ್ದು ಹೋಗುವಂತಿದೆ ಎನ್ನುತ್ತಾರೆ ಇಲ್ಲಿನ ಜನರು. ಪ್ರತಿ ಮಳೆಗಾಲವನ್ನೂ ಎದುರಿಸಿ ನಿಂತಿರುವ ಶಾಲೆಯ ಸದ್ಯದ ಪರಿಸ್ಥಿತಿ ಈ ಮಳೆಗಾಲಕ್ಕಂತೂ ಗ್ಯಾರಂಟಿಯೇ ಇಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ಕಟ್ಟಿದ ಟಾರ್ಪಲ್‍ನಿಂದ ಶಾಲೆ ಉಸಿರಾಡುತ್ತಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ತಮಗೇನೂ ಗೊತ್ತಿಲ್ಲ ಎಂಬಂತೆ ಪೋಷಕರು ಕಟ್ಟಿರುವ ಟಾರ್ಪಲ್ ನೋಡಿ ಸುಮ್ಮನಾಗುತ್ತಿದ್ದಾರೆ. ದುರಸ್ಥಿಯ ಗೋಜಿಗೆ ಅವರು ಹೋಗಿಲ್ಲ. ಹೀಗಿದ್ದಾಗ ಅಪಾಯ ಸಂಭವಿಸಿದರೆ ಏನು ಗತಿ, ಯಾರು ಹೊಣೆ ಎಂಬುದು ಸ್ಥಳೀಯರ ಪ್ರಶ್ನೆ.

ಶಾಲೆಯ ಗೋಡೆಗಳಿಗೆ ಆಧಾರವಾಗಿರುವ ಪ್ಲಾಸ್ಟಿಕ್ ಶೀಟ್: ಹಲವು ವರ್ಷಗಳಿಂದ ಈ ಶಾಲೆಗೆ ಅನುದಾನವೇ ಸಿಕ್ಕಿಲ್ಲವಂತೆ. ಸರ್ಕಾರದ ಬೇಜವಾಬ್ದಾರಿ ಹಾಗೂ ಜೋರು ಮಳೆಯ ನಡುವೆ ಶಾಲೆ ಕುಸಿದು ಬೀಳುವತ್ತ ಸಾಗುತ್ತಿದೆ. ಶಾಲೆಯ ಕಚೇರಿ ಬಿಟ್ಟರೆ ಉಳಿದೆಲ್ಲ ಕೊಠಡಿಗಳ ಗೋಡೆಗಳು ಬಿರುಕು ಬಿಟ್ಟಿವೆ. ಕಟ್ಟಡ, ಕೊಠಡಿ, ಶೌಚಾಲಯ ಎಲ್ಲವೂ ಅಯೋಮಯವೇ ಆಗಿದೆ. ಹೀಗಿದ್ದಾಗ ಮಕ್ಕಳ ಸ್ಥಿತಿಯ ದಯನೀಯ ಎನ್ನಲು ಬೇರೆ ಕಾರಣ ಬೇಕಿಲ್ಲ. ಕಳೆದ ಮಳೆಗಾಲದಲ್ಲಿ ಶಾಲೆಯ ಗೋಡೆಗಳಿಗೆ ಪೋಷಕರು ಕಟ್ಟಿರುವ ಪ್ಲಾಸ್ಟಿಕ್ ಶೀಟ್ ಬೆನ್ನೆಲುಬಾಗಿ ನಿಂತಿದೆ. ಈ ವರ್ಷ ಗೋಡೆಗಳು ಮತ್ತಷ್ಟು ಅಪಾಯಕಾರಿಯಾಗಿಯೇ ಕಾಣುತ್ತಿವೆ ಅನ್ನೋದು ಇಲ್ಲಿನ ಸ್ಥಳೀಯರ ಮಾತು.

ಶಾಲೆ ಸರಿಪಡಿಸದ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಇಲ್ಲಿನ ಜನರು ತೀವ್ರ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಹೀಗಾಗಿ ಎಚ್ಚೆತ್ತುಕೊಂಡಿರುವ ಜಿಲ್ಲಾಧಿಕಾರಿ ರಮೇಶ್ ಅವರು ಡಿಡಿಪಿಐ ಹಾಗೂ ಬಿಇಓಗೆ ಕೂಡಲೇ ಸ್ಥಳ ಪರಿಶೀಲನೆ ನಡೆಸಿ ದುರಸ್ಥಿಗೆ ಸೂಚಿಸಿದ್ದಾರೆ. ಸರ್ಕಾರ ಆದಷ್ಟು ಬೇಗ ಪುಟ್ಟ ಮಕ್ಕಳ ಶಾಲೆಗೊಂದು ಸುವ್ಯವಸ್ಥಿತ ಕಟ್ಟಡ ಅಥವಾ ಶಾಲೆಯನ್ನು ಶೀಘ್ರವೇ ದುರಸ್ಥಿ ಮಾಡಿಕೊಡಲಿ ಅನ್ನೋದು ಪೋಷಕರ ಆಗ್ರಹವಾಗಿದೆ.

ಇದನ್ನೂ ಓದಿ:ಅಳಿವಿನಂಚಿನಲ್ಲಿದ್ದ ಸರ್ಕಾರಿ ಶಾಲೆಯ ಉನ್ನತೀಕರಣ: ಉದ್ಘಾಟನೆ ನೆರವೇರಿಸಿದ ಕೃಷ್ಣ ಭೈರೇಗೌಡ

Last Updated : May 26, 2023, 10:09 AM IST

ABOUT THE AUTHOR

...view details