ಚಿಕ್ಕಮಗಳೂರು:ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಮೂಡಿಗೆರೆ ತಾಲೂಕಿನ ಬಲಿಗೆ ರಸ್ತೆಯಲ್ಲಿ ಗುಡ್ಡ ಕುಸಿದು ಬಿದ್ದಿದೆ.
ರಸ್ತೆ ಮೇಲೆ ಬೃಹತ್ ಗಾತ್ರದ ಬಂಡೆಗಳು ಹಾಗೂ ಮಣ್ಣು ಬಂದು ರಸ್ತೆಯ ಮೇಲೆ ಬಿದ್ದಿದ್ದು, ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಚಿಕ್ಕನ ಕುಡಿಗೆ ಹಾಗೂ ಬಲಿಗೆ ರಸ್ತೆ ಸಂಪೂರ್ಣ ಬಂದ್ ಆಗಿದೆ.
ಈ ಘಟನೆಯಿಂದ 3 ಗ್ರಾಮಗಳ ಸಂಪರ್ಕ ಕಡಿತವಾಗಿದ್ದು, ಸ್ಥಳಕ್ಕೆ ಹೊರನಾಡು ಪಿಡಿಒ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಈ ಘಟನೆಯಿಂದ ಕಳಸ, ಚಿಕ್ಕನ ಕುಡಿಗೆ ಹಾಗೂ ಬಲಿಗೆ, ಮೆಣಸಿನಹಾಡ್ಯ, ಗ್ರಾಮದ ಸಂಪರ್ಕ ತಾತ್ಕಾಲಿಕವಾಗಿ ಕಡಿತವಾಗಿದೆ. ಇದು ಶೃಂಗೇರಿ ಸಂಪರ್ಕ ಹೊಂದಿದ್ದ ಪರ್ಯಾಯ ರಸ್ತೆಯಾಗಿತ್ತು. ಕಳಸ ಸಮೀಪವಿರುವ ಹೆಬ್ಬಾಳ ಸೇತುವೆ, ಪದೇ ಪದೇ ಮುಳುಗಡೆ ಆಗುತ್ತಿರುವುದರಿಂದ, ಜೆಸಿಬಿಗಳು ಹೋಗಲು ವಿಳಂಬವಾಗುತ್ತಿದೆ.
ಜೆಸಿಬಿ ಮೂಲಕ ತೆರವು ಕಾರ್ಯಾಚರಣೆಗೆ ಜಿಲ್ಲಾಡಳಿತ ಮುಂದಾಗಿದ್ದು, ಮಲೆನಾಡು ಭಾಗದಲ್ಲಿ ಬಿರುಗಾಳಿ ಸಹಿತ, ಧಾರಾಕಾರ ಮಳೆಯಾಗುತ್ತಿದ್ದು, ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಮಲೆನಾಡ ಜನರು ಹೈರಾಣಾಗಿದ್ದಾರೆ.