ಚಿಕ್ಕಮಗಳೂರು/ಗದಗ/ ಚಿತ್ರದುರ್ಗ : ಚಿಕ್ಕಮಗಳೂರಿನ ಐಡಿಎಸ್ಜಿ ಕಾಲೇಜಿನಲ್ಲಿ ಇಂದು ಕೂಡ ಹಿಜಾಬ್ ಮತ್ತು ಕೇಸರಿ ಶಾಲು ನಡುವೆ ಟಕ್ಕರ್ ಮುಂದುವರೆದಿದೆ. ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಪ್ರವೇಶಕ್ಕೆ ನಿರಾಕರಣೆ ಮಾಡಲಾಗಿದ್ದು, ಹಿಜಾಬ್ ತೆಗೆದರಷ್ಟೆ ಕಾಲೇಜು ಪ್ರವೇಶಕ್ಕೆ ಅವಕಾಶ ಎಂದು ಕಾಲೇಜು ಆಡಳಿತ ಮಂಡಳಿ ಹೇಳಿದೆ.
ಈ ವೇಳೆ ಐಡಿ ಕಾರ್ಡ್ ಚೆಕ್ ಮಾಡಿ ಕಾಲೇಜು ಸಿಬ್ಬಂದಿ, ವಿದ್ಯಾರ್ಥಿಗಳನ್ನು ಒಳಗೆ ಬಿಡುತ್ತಿದ್ದಾರೆ. ಹಿಜಾಬ್ ತೆಗೆದು ತರಗತಿಯಲ್ಲಿ ಕೂರುವಂತೆ ಸೂಚನೆ ನೀಡಿದ್ದು, ಹಿಜಾಬ್ ತೆಗೆಯಲ್ಲ ಎಂದು ತರಗತಿಯನ್ನ ಬಹಿಷ್ಕರಿಸಿ ವಿದ್ಯಾರ್ಥಿನಿಯರು ಹೊರ ಬಂದಿದ್ದಾರೆ. ಕಡ್ಡಾಯವಾಗಿ ಸಮವಸ್ತ್ರ ಧರಿಸಿ ಬರಬೇಕೆಂದು ಕಾಲೇಜು ಆಡಳಿತ ಮಂಡಳಿ ಆದೇಶ ಮಾಡಿತ್ತು.
ಹಿಜಾಬ್-ಕೇಸರಿ ಶಾಲು ವಿವಾದ ಈ ನಡುವೆ ಮತ್ತೊಂದು ಅಚ್ಚರಿ ನಡೆದಿದ್ದು, ಕೇಸರಿ ಜೊತೆ ನೀಲಿ ಶಾಲನ್ನೂ ಕೆಲವು ವಿದ್ಯಾರ್ಥಿಗಳು ಧರಿಸಿ ಬಂದಿದ್ದಾರೆ. ಅಂಬೇಡ್ಕರ್ ಎಲ್ಲರೂ ಒಂದೇ ಎಂದಿದ್ದರು, ನಾವೆಲ್ಲಾ ಒಂದೇ. ಕಾಲೇಜಲ್ಲಿ ಹಿಜಾಬ್ ತೆಗೆಯೋವರ್ಗೂ, ಕೇಸರಿ ತೆಗೆಯಲ್ಲ. ಕಾಲೇಜಲ್ಲಿ ಎಲ್ಲರೂ ಒಂದೇ, ಇಲ್ಲಿ ಸಮಾನತೆ ಸಾರಬೇಕು ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ.
ಇನ್ನೂ ಯೂನಿಫಾರಂ ಧರಿಸದ ವಿದ್ಯಾರ್ಥಿಗಳಿಗೆ ಕಾಲೇಜು ಪ್ರವೇಶಕ್ಕೆ ಆಡಳಿತ ಮಂಡಳಿ ನಿರಾಕರಣೆ ಮಾಡಿದ ಹಿನ್ನೆಲೆ, ಕೇಸರಿ ಶಾಲು ಧರಿಸಿ ಕೆಲ ವಿದ್ಯಾರ್ಥಿಗಳು ಕಾಂಪೌಂಡ್ ಹಾರಿ ಕ್ಯಾಂಪಸ್ಗೆ ಬಂದಿದ್ದಾರೆ. ಕ್ಯಾಂಪಸ್ ಒಳಗೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ, ತರಗತಿಗೆ ಅವಕಾಶ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಈ ಘಟನೆಯಿಂದ ಸ್ಥಳದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪ್ರತಿಭಟನಾನಿರತರನ್ನ ಪ್ರಾಂಶುಪಾಲರು ಮನವೊಲಿಸುವ ಪ್ರಯತ್ನ ಮಾಡಿದರು.
ಹಿಜಾಬ್-ಕೇಸರಿ ಶಾಲು ವಿವಾದ ಗದಗನಲ್ಲಿ ಕಾಲೇಜ್ಗೆ ರಜೆ ಘೋಷಿಸಿದ ಆಡಳಿತ ಮಂಡಳಿ :ಗದಗ ನಗರಕ್ಕೂ ಈ ಹಿಜಾಬ್ ಮತ್ತು ಕೇಸರಿ ವಿವಾದ ನಿನ್ನೆಯಿಂದ ಎಂಟ್ರಿ ಕೊಟ್ಟು ಭಾರಿ ಹೈಡ್ರಾಮಾ ಸೃಷ್ಟಿ ಮಾಡಿದೆ. ನಗರದ ಹಳೇ ಕೋರ್ಟ್ ಆವರಣದಲ್ಲಿರೋ ಮಹಿಳಾ ಪ್ರಥಮ ದರ್ಜೆ ಕಾಲೇಜ್ನಲ್ಲಿ ಈ ಹಿಜಾಬ್ ವಿವಾದ ಭಾರಿ ಕೋಲಾಹಲ ಸೃಷ್ಟಿಸಿದೆ. ನಿನ್ನೆ ದಿಢೀರ್ ಕೇಸರಿ ಧರಿಸಿಕೊಂಡು ಬಂದಿದ್ದ ಕೆಲವು ವಿದ್ಯಾರ್ಥಿಗಳನ್ನ ನೋಡಿ ಕಾಲೇಜ್ ಆಡಳಿತ ಮಂಡಳಿ ಕಂಗಾಲಾಗಿತ್ತು. ಹೀಗಾಗಿ, ಇಂದು ಯಾರೂ ಕೇಸರಿ ಶಾಲು ಹಾಗೂ ಹಿಜಾಬ್ ಧರಿಸಿಕೊಂಡು ಕಾಲೇಜ್ಗೆ ಬರಬಾರದು ಅಂತಾ ಕಾಲೇಜ್ ಆಡಳಿತ ಮಂಡಳಿ ಆದೇಶ ಹೊರಡಿಸಿತ್ತು.
ಆದರೂ ಸಹ ಇಂದು ವಿದ್ಯಾರ್ಥಿಗಳು ಹಿಜಾಬ್ ಧರಿಸಿಕೊಂಡು ಕಾಲೇಜ್ಗೆ ಬಂದಿದ್ದರು. ಹೀಗಾಗಿ, ಪ್ರಾಚಾರ್ಯರು ಮತ್ತು ಎಲ್ಲ ಸಿಬ್ಬಂದಿ ಹಿಜಾಬ್ ಧರಿಸಿದ ವಿದ್ಯಾರ್ಥಿಗಳಿಗೆ ಕ್ಲಾಸ್ ರೂಂನೊಳಗೆ ಪ್ರವೇಶ ಮಾಡಲು ಅವಕಾಶ ಕೊಡಲಿಲ್ಲ. ಹೀಗಾಗಿ, ಹಿಜಾಬ್ ಧರಿಸಿಕೊಂಡೇ ನಾವು ಕ್ಲಾಸ್ನೊಳಗೆ ಕೂರುತ್ತೇವೆ ಅಂತಾ ವಿದ್ಯಾರ್ಥಿಗಳು ಪಟ್ಟು ಹಿಡಿದರು. ಆದ್ರೆ, ಪೊಲೀಸರು ಮಧ್ಯಪ್ರವೇಶಿಸಿ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಜೊತೆಗೆ ಈ ನಡುವೆ ವಿದ್ಯಾರ್ಥಿಗಳ ಪೋಷಕರು ಸಹ ಎಂಟ್ರಿ ಕೊಟ್ಟು ಕೆಲಹೊತ್ತು ಪೊಲೀಸರು, ಪೋಷಕರು ಮತ್ತು ಪ್ರಾಚಾರ್ಯರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಬಳಿಕ ವಿದ್ಯಾರ್ಥಿನಿಯರು ಕಾಲೇಜ್ ಎದುರು ಪ್ರತಿಭಟನೆಗೆ ಇಳಿದರು. ಬಳಿಕ ಪರಿಸ್ಥಿತಿ ವಿಕೋಪಕ್ಕೆ ಹೋಗಬಾರದು ಅಂತಾ ಮುಂಜಾಗೃತಾ ಕ್ರಮವಾಗಿ ಕಾಲೇಜ್ಗೆ ದಿಢೀರ್ ರಜೆ ಘೋಷಣೆ ಮಾಡಿದರು. ಬಳಿಕ ಪರಿಸ್ಥಿತಿ ತಿಳಿಗೊಂಡಿದ್ದು, ಕೋರ್ಟ್ ಆದೇಶ ಬರೋವರೆಗೂ ಹಿಜಾಬ್ ಧರಿಸಬೇಕೋ ಬೇಡ್ವೋ ಅನ್ನೋ ಗೊಂದಲದಲ್ಲಿ ವಿದ್ಯಾರ್ಥಿಗಳು, ಕಾಲೇಜ್ ಸಿಬ್ಬಂದಿ ಇದ್ದಾರೆ. ಇನ್ನೂ ಗೊಂದಲ ಮುಂದುವರೆದಿಂತಿದೆ.
ಹಿಜಾಬ್-ಕೇಸರಿ ಶಾಲು ವಿವಾದ ಚಿತ್ರದುರ್ಗದಲ್ಲಿ ಗಲಾಟೆ :ಹಿಜಾಬ್, ಕೇಸರಿ ಶಾಲು ವಿವಾದ ಮಧ್ಯ ಕರ್ನಾಟಕದ ಹೆಬ್ಬಾಗಿಲು ಕೋಟೆನಾಡು ಚಿತ್ರದುರ್ಗಕ್ಕೂ ಎಂಟ್ರಿ ಕೊಟ್ಟು, ಜನರಲ್ಲಿ ತಳಮಳ ಮೂಡಿಸಿದೆ. ಜಿಲ್ಲೆಯ ಹೊಸದುರ್ಗ ಪಟ್ಟಣದ ಸರ್ಕಾರಿ ಪದವಿ ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಿಜಾಬ್ ಹಾಗೂ ಕೇಸರಿ ಶಾಲು ಧರಿಸಿ ಬಂದಿದ್ದು, ಕಾಲೇಜು ಸಿಬ್ಬಂದಿ ವರ್ಗದವರು ಹಿಜಾಬ್ ಹಾಗೂ ಕೇಸರಿ ಶಾಲು ಧರಿಸಿ ಬಂದಿದ್ದ ವಿದ್ಯಾರ್ಥಿಗಳಿಗೆ ಕಾಲೇಜು ಪ್ರವೇಶ ಮಾಡಲು ಬಿಟ್ಟಿಲ್ಲ.
ಈ ಹಿನ್ನೆಲೆಯಲ್ಲಿ ಕಾಲೇಜು ಸಿಬ್ಬಂದಿ ಜತೆಗೆ ವಿದ್ಯಾರ್ಥಿಗಳು ವಾಗ್ವಾದ ನಡಿಸಿದ್ದು, ಕೇಸರಿ ಶಾಲು, ಹಿಜಾಬ್ ಧರಿಸಿದವರನ್ನು ಕಾಲೇಜು ಆಡಳಿತ ಮಂಡಳಿ ವಾಪಸ್ ಕಳಿಸಿದರು. ಕಾಲೇಜು ಪ್ರಿನ್ಸಿಪಾಲ್ ಮಂಜುನಾಥ್ ಇಂದಿನ ಕೊನೆಯ ಎರಡು ತರಗತಿ ರದ್ದು ಮಾಡಿದರು. ವಿದ್ಯಾರ್ಥಿಗಳ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಹೊಸದುರ್ಗ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.