ಚಿಕ್ಕಮಗಳೂರು:ಹೇಮಾವತಿ ಅದು ಕೇವಲ ಒಂದು ನದಿಯಲ್ಲ. ಲಕ್ಷಾಂತರ ಜನರ ಜೀವನಾಡಿ. ರೈತರ ಪಾಲಿನ ದೇವತೆ, ಮಲೆನಾಡ ಬೆಟ್ಟಗಳ ಮಧ್ಯೆ ಹುಟ್ಟುವ ಹೇಮಾವತಿ ಹಾಸನ ಜಿಲ್ಲೆಯ ಜೀವದಾತೆ. ಮಳೆಗಾಲದಲ್ಲಿ ಭೋರ್ಗರೆಯುವ ಈಕೆ ಬೇಸಿಗೆಯಲ್ಲೂ ನಿರಂತರವಾಗಿ ಹರಿಯುತ್ತಾಳೆ. ಕಾಫಿನಾಡ ಬೆಟ್ಟದಲ್ಲಿ ಹುಟ್ಟುವ ಈ ಮನೆಮಗಳು ಹಾಸನ, ಮೈಸೂರು, ಮಂಡ್ಯ, ಬೆಂಗಳೂರುವರೆಗೂ ಹರಿಯುತ್ತಾಳೆ. ಆದರೆ, ಹೇಮಾವತಿ ಉಗಮ ಸ್ಥಾನದಲ್ಲೇ ನದಿ ನೀರು ಸಂಪೂರ್ಣ ಕಲುಷಿತಗೊಳ್ಳುತ್ತಿದ್ದು, ಜಲಚರಗಳ ಜೀವಕ್ಕೆ ಕುತ್ತು ಬಂದಿದೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಜಾವಳಿ ಸಮೀಪ ಹುಟ್ಟುವ ಈ ನೆಲದ ಜೀವನಾಡಿ ಹೇಮಾವತಿ ನದಿ ಮಳೆಗಾಲದಲ್ಲಿ ಅಬ್ಬರಿಸಿ ಎದುರಿಗೆ ಸಿಕ್ಕ ವಸ್ತುಗಳು, ಹೊಲ, ಗದ್ದೆ, ತೋಟಗಳಲ್ಲಿ ಹರಿಯುತ್ತಾಳೆ. ಆದರೆ ಕೆಲವರ ಸ್ವಾರ್ಥಕ್ಕೆ ನದಿ ನೀರು ಕಲುಷಿತಗೊಳ್ಳುತ್ತಿದೆ. ಮೂಡಿಗೆರೆ-ಸಖಲೇಶಪುರ ಭಾಗದ ಕಾಫಿ ಬೆಳೆಗಾರರು ಕಾಫಿಯನ್ನು ಪಲ್ಪರಿಂಗ್ ಮಾಡಿ ಪಲ್ಪರಿಂಗ್‍ನ ತ್ಯಾಜ್ಯದ ನೀರನ್ನು ಹೇಮಾವತಿ ಒಡಲಿಗೆ ಬಿಡುತ್ತಿದ್ದಾರೆ.
ನದಿಯ ಬಳಿ ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ:ಮಳೆಗಾಲದಲ್ಲಿ ಮಣ್ಣು ಮಿಶ್ರಿತ ಕೆಂಪು ನೀರು ಹರಿದರೆ, ಬೇಸಿಗೆಯಲ್ಲಿ ಶುಭ್ರವಾಗಿ ಹರಿಯುತ್ತಾಳೆ. ಆದರೆ, ಕಾಫಿ ತೋಟದ ಮಾಲೀಕರು ಕಾಫಿ ಪಲ್ಪರಿಂಗ್ ನೀರನ್ನ ನೇರವಾಗಿ ಹೇಮಾವತಿ ಒಡಲು ಸೇರಿಸುತ್ತಿರುವುದರಿಂದ ಸ್ವಚ್ಛವಾಗಿ ಹರಿಯುವ ನದಿಯು ಕೆಲವು ಕಡೆಗಳಲ್ಲಿ ಕಪ್ಪು ಬಣ್ಣಕ್ಕೆ ತಿರುಗಿದೆ. ಇದರಿಂದ ನದಿ ನೀರು ದುರ್ವಾಸನೆ ಬೀರುತ್ತಿದ್ದು, ನದಿಯ ಬಳಿ ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಬಂದಿದೆ ಎನ್ನುವುದು ಸ್ಥಳೀಯರ ಆರೋಪ. ಕಾಫಿ ಪಲ್ಪರ್ ಮಾಡಿದ ನೀರನ್ನು ಇಂಗು ಗುಂಡಿ ಮೂಲಕ ಇಂಗಿಸಬೇಕು ಮತ್ತು ಅಧಿಕಾರಿಗಳು ಇತ್ತ ಸೂಕ್ತ ಗಮನ ಹರಿಸಬೇಕೆಂದು ಜನರು ಆಗ್ರಹಿಸಿದ್ದಾರೆ.
ಇಡೀ ಹಾಸನ ಜಿಲ್ಲೆಗೆ ಹೇಮಾವತಿ ನದಿ ಆಸರೆ:ಹೇಮಾವತಿ ನದಿ ಗೊರೂರು ಮೂಲಕ ಕೆ.ಆರ್.ಎಸ್. ಡ್ಯಾಂ ಸೇರಿ ಮೈಸೂರು-ಮಂಡ್ಯ-ಬೆಂಗಳೂರು ದಾಟಿ ತಮಿಳುನಾಡಿಗೂ ಹರಿಯುತ್ತದೆ. ಆದರೆ ನದಿ ನೀರು ಹೀಗೆ ಕಲುಷಿತಗೊಂಡರೇ ಅದನ್ನ ಬಳಸುವ ಜನಸಾಮಾನ್ಯರ ಆರೋಗ್ಯದ ಕಥೆ ಏನು ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಇಡೀ ಹಾಸನ ಜಿಲ್ಲೆಗೆ ಹೇಮಾವತಿ ನದಿ ಆಸರೆಯಾಗಿದ್ದು, ನದಿಯ ನೀರನ್ನು ಜನ-ಜಾನುವಾರುಗಳು, ಬೆಳೆಗಳಿಗೆ ಬಳಸಲಾಗುತ್ತದೆ. ಇದರಿಂದ ಜಲಚರಗಳ ಜೀವಕ್ಕೆ ಕುತ್ತಾಗಿದ್ದು, ಈ ನೀರನ್ನು ಸೇವಿಸುವ ಜಾನುವಾರುಗಳು ರೋಗಕ್ಕೆ ತುತ್ತಾಗುವ ಸಾಧ್ಯತೆಯಿದೆ. ಹೇಮಾವತಿ ನದಿ ನೀರನ್ನು ಅನೇಕ ಕಡೆ ಕುಡಿಯುವ ನೀರಿನ ಯೋಜನೆಗಳಿಗೆ ಬಳಸಿದ್ದು ಈ ನೀರನ್ನು ಸೇವಿಸಿದರೆ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಲಿದೆ.