ಕರ್ನಾಟಕ

karnataka

ETV Bharat / state

ಹೆಬ್ಬಾಳ ಸೇತುವೆ, ಕಪ್ಪೆ ಶಂಕರ ದೇಗುಲ ಮುಳುಗಡೆ.. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗಭದ್ರಾ ನದಿ - ಕೊಪ್ಪ ತಾಲೂಕಿನ ಉತ್ತಮೇಶ್ವರ ಸೇತುವೆ

ಕಳೆದ ಹಲವು ದಿನಗಳಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಇದೀಗ ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಹಾನಿ ಪ್ರದೇಶಕ್ಕೆ ಸಚಿವ ಕೆ ಜೆ ಜಾರ್ಜ್  ಭೇಟಿ, ಪರಿಶೀಲನೆ
ಹಾನಿ ಪ್ರದೇಶಕ್ಕೆ ಸಚಿವ ಕೆ ಜೆ ಜಾರ್ಜ್ ಭೇಟಿ, ಪರಿಶೀಲನೆ

By

Published : Jul 23, 2023, 8:22 PM IST

ಹಾನಿಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ ಜೆ ಜಾರ್ಜ್​ ಭೇಟಿ ನೀಡಿ ಮಾತನಾಡಿದ್ದಾರೆ

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಕಳೆದ ಆರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಭದ್ರಾ ನದಿ ಅಪಾಯದ ಮಟ್ಟ ಮೀರಿ ‌ಹರಿಯುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗ ಹಾಗೂ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಉತ್ತಮ ಹಾಗೂ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆ ಭದ್ರೆ ತುಂಬಿ ಹರಿಯುತ್ತಿದ್ದು, ಕಳಸದ ಬಳಿ ಇರುವ ಹೆಬ್ಬಾಳೆ ಸೇತುವೆಯ ಮೇಲೆ ನೀರು ಹರಿದು ಸೇತುವೆ ಮುಳುಗಡೆಯಾಗಿದೆ.

ಕಳೆದ ಆರು ದಿನಗಳಿಂದ ನಿರಂತರವಾಗಿ ಸುರಿದ ಧಾರಾಕಾರ ಮಳೆಯಿಂದ ಈ ಸೇತುವೆ ಈ ವರ್ಷದಲ್ಲಿ ಮೊದಲ ಬಾರಿಗೆ ಮುಳುಗಡೆಯಾಗಿದ್ದು, ಕಳಸ - ಹೊರನಾಡು ಸಂಪರ್ಕ ಕಡಿತವಾಗಿದೆ. ಕುದುರೆ ಮುಖ, ಶೃಂಗೇರಿ, ಕೊಪ್ಪ ಸುತ್ತಮುತ್ತ ಧಾರಾಕಾರ ಮಳೆ ಆಗುತ್ತಿರುವ ಪರಿಣಾಮ, ನದಿಗಳ ಹರಿವಿನ ಮಟ್ಟದಲ್ಲಿಯೂ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ.

ಈ ಭಾಗದಲ್ಲಿ ವಾಹನ ಸಂಚಾರದಲ್ಲಿ ಸಂಪೂರ್ಣ ಅಡಚಣೆ ಉಂಟಾಗಿದೆ. ಮಲೆನಾಡು ಭಾಗದಲ್ಲಿ ಎಡಬಿಡದೆ ಧಾರಾಕಾರ ಮಳೆ ಸುರಿಯುತ್ತಿದ್ದು, ಮಲೆನಾಡು ಭಾಗದಲ್ಲಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಶೃಂಗೇರಿಯಲ್ಲಿಯೂ ಧಾರಾಕಾರ ಮಳೆ ಸುರಿಯುತ್ತಿದ್ದು, ಅಪಾಯದ ಮಟ್ಟ ಮೀರಿ ತುಂಗಾ ನದಿ ಹರಿಯುತ್ತಿದೆ. ನದಿಯ ತಟದಲ್ಲಿರುವ ಕಪ್ಪೆ ಶಂಕರ ದೇಗುಲ ಮುಳುಗಡೆ ಆಗಿದ್ದು, ದೇವಸ್ಥಾನದ ಪಕ್ಕದ ಗಾಂಧಿ ಮೈದಾನಕ್ಕೆ ತುಂಗಾ ನದಿಯ ನೀರು ನುಗ್ಗಿದೆ.

ಹಾನಿಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ ಜೆ ಜಾರ್ಜ್​ ಭೇಟಿ

ಹಾನಿ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ:ಮಲೆನಾಡಿನ ವಿವಿಧ ಭಾಗದಲ್ಲಿ ಅನೇಕ ಕಡೆ ಮಳೆಹಾನಿ ಉಂಟಾಗಿದೆ. ಹೀಗಾಗಿ, ಹಾನಿಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಭೇಟಿ ನೀಡಿ, ಪರಿಶೀಲನೆ ನಡೆಸಿರುವ ಘಟನೆ ನಡೆದಿದೆ.

ಸಚಿವ ಕೆ ಜೆ ಜಾರ್ಜ್ ಜಿಲ್ಲೆಯ ಕೊಪ್ಪ ತಾಲೂಕಿನ ವಿವಿಧ ಭಾಗಗಳಿಗೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕೊಪ್ಪ ತಾಲೂಕಿನ ಉತ್ತಮೇಶ್ವರ ಸೇತುವೆ, ಹೆಗ್ಗಾರು ಕೂಡಿಗೆ, ಕೊಗ್ರೆ ಸೇತುವೆ, ಬಸರಿಕಟ್ಟೆ, ಹುತ್ತಿನಗದ್ದೆ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಿರಂತರ ಮಳೆಯಿಂದ ಈ ಪ್ರದೇಶಗಳಲ್ಲಿ ಅಧಿಕ ಹಾನಿ ಉಂಟಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಾಥ್ ನೀಡಿದ್ದಾರೆ. ಸುರಿಯುತ್ತಿರುವ ಧಾರಾಕಾರ ಮಳೆ ನಡುವೆಯೇ ಸ್ಥಳ ಪರಿಶೀಲನೆಯನ್ನು ಸಚಿವ ಜಾರ್ಜ್ ನಡೆಸಿದ್ದು, ಈ ವೇಳೆ ಕೊಪ್ಪ ತಾಲೂಕಿನಲ್ಲಿರುವ ಸಮಸ್ಯೆಗಳ ಬಗ್ಗೆ ಶೃಂಗೇರಿ ಶಾಸಕ ಟಿ ಡಿ ರಾಜೇಗೌಡ ಕೂಲಂಕಶವಾಗಿ ತಿಳಿಸಿದ್ದಾರೆ. ಸ್ಥಳ ಪರಿಶೀಲನೆ ವೇಳೆ ಸ್ಥಳೀಯರೊಂದಿಗೆ ಸಚಿವ ಜಾರ್ಜ್ ಚರ್ಚೆ ನಡೆಸಿದ್ದು, ಕೂಡಲೇ ಎಲ್ಲಾ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

50 ಕ್ಕೂ ಹೆಚ್ಚು ಅಡಿಕೆ ಮರಗಳು ನಾಶ:ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ನಿರಂತರ ಮಳೆಗೆ ಧರೆಗೆ ಬೃಹತ್ ಗಾತ್ರದ ಮರ ಉರುಳಿ ಬಿದ್ದಿದೆ. ಕೊಪ್ಪ ತಾಲ್ಲೂಕಿನ ನರಸೀಪುರ ಗ್ರಾಮ ಪಂಚಾಯಿತಿಯ ಕುಂಚೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಂಚಿನ ಸರಳಿನ ನಾಗೇಶ್ ಎನ್ನುವವರ ಅಡಿಕೆ ತೋಟದ ಮೇಲೆ ಮರ ಬಿದ್ದು, 50 ಕ್ಕೂ ಹೆಚ್ಚು ಅಡಿಕೆ ಮರಗಳು ನಾಶವಾಗಿದೆ.

ಎರಡು ದಿನಗಳ ಹಿಂದೆ ಇದೇ ತೋಟದ ಮೇಲೆ ಬೃಹತ್ ಮರ ಬಿದ್ದಿತ್ತು. ಆಗಲೂ ಹತ್ತಾರು ಅಡಿಕೆ ಮರ ನಾಶ ಆಗಿತ್ತು. ಅಡಿಕೆ ಮರಗಳು ನಾಶವಾದ ಹಿನ್ನೆಲೆ, ರೈತ ನಾಗೇಶ್​ಗೆ ಆತಂಕ ಮನೆ ಮಾಡಿದೆ. ಧಾರಾಕಾರ ಮಳೆ, ಭೀಕರ ಗಾಳಿಗೆ ಹತ್ತು ಹಲವು ಅವಘಡ ಸೃಷ್ಟಿಯಾಗಿದೆ. ಕಳಸ ತಾಲೂಕಿನ ಕೊಂಡದಮನೆ ಗ್ರಾಮದ ರಸ್ತೆಯಲ್ಲಿ ಮರ ಬಿದ್ದಿದೆ. ರಸ್ತೆ ಸಂಚಾರದಲ್ಲಿ ಅಸ್ತವ್ಯಸ್ತತೆ ಉಂಟಾಗಿದ್ದು, ಭಯದಿಂದಲೇ ವಾಹನ ಸವಾರರು ವಾಹನ ಚಾಲನೆ ಮಾಡುತ್ತಿದ್ದಾರೆ.

ಇನ್ನು ಸ್ಥಳಕ್ಕೆ ಯಾವ ಅಧಿಕಾರಿಗಳು ಭೇಟಿ ನೀಡಿಲ್ಲ. ಮಲೆನಾಡಿನ ವಿವಿಧ ಭಾಗದಲ್ಲಿ ಧರೆಗೆ ವಿದ್ಯುತ್ ಕಂಬಗಳು ಹಾಗೂ ಬೃಹತ್ ಗಾತ್ರದ ಮರಗಳು ಬೀಳುತ್ತಿರುವ ಘಟನೆಯು ನಡೆಯುತ್ತಿದೆ. ಹೆಬ್ಬಾಳ ಸೇತುವೆ ಮುಳುಗಡೆ ಹಿನ್ನೆಲೆ, ಕಳಸ-ಹೊರನಾಡು ಸಂಪರ್ಕ ಸಂಪೂರ್ಣ ಬಂದ್ ಆಗಿದ್ದು, ಅನ್ಯ ಮಾರ್ಗ, ಹಳುವಳ್ಳಿಯಲ್ಲೂ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ.

ಅನ್ನಪೂರ್ಣೇಶ್ವರಿ ದರ್ಶನಕ್ಕೆ ಬಂದ ಭಕ್ತರ ಪರದಾಟ: ಬೆಳಗ್ಗೆಯಿಂದಲೂ ಹೆಬ್ಬಾಳೆ ಸೇತುವೆ ಮೇಲಿನ ನೀರು ಕಡಿಮೆ ಆಗುತ್ತಿಲ್ಲ. ಕ್ಷಣ ಕ್ಷಣಕ್ಕೂ ಭದ್ರೆಯ ಒಡಲು ಹೆಚ್ಚಾಗುತ್ತಿದ್ದು, ಹೆಬ್ಬಾಳ ಸೇತುವೆ ಮೇಲೆ ನಾಲ್ಕು ಅಡಿಗೂ ಅಧಿಕ ನೀರು ಹರಿಯುತ್ತಿದೆ. ಎರಡೂ ಸೈಡ್ ಬ್ಯಾರಿಕೇಡ್, ಸಂಚಾರ ಬಂದ್ ಪೊಲೀಸರು ಮಾಡಿದ್ದಾರೆ. ಪ್ರವಾಸಿಗರು, ಅನ್ನಪೂರ್ಣೇಶ್ವರಿ ದರ್ಶನಕ್ಕೆ ಬಂದ ಭಕ್ತರು ಪರದಾಟ ನಡೆಸುವಂತಾಗಿದೆ.

ಚಿಕ್ಕಮಗಳೂರು ತಾಲೂಕಿನ ವಸ್ತಾರೆ ಬಳಿ ಮರ ರಸ್ತೆಗೆ ಬಿದ್ದು, ಕಡೂರು-ಮಂಗಳೂರು, ರಾ. ಹೆ. 173 ಬಂದ್ ಆಗಿದೆ. ಚಿಕ್ಕಮಗಳೂರು-ಮಂಗಳೂರು ಸಂಪರ್ಕ ಕಡಿತ ಉಂಟಾಗಿದ್ದು, ಆಲ್ದೂರು ಮೂಲಕ ಮೂಡಿಗೆರೆ, ಮಂಗಳೂರು ವಾಹನಗಳು ಹೋಗುತ್ತಿವೆ. 20 ಕಿ. ಮೀ ಸುತ್ತಿಕೊಂಡು ವಾಹನಗಳು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕುದುರೆಮುಖದಲ್ಲಿ ಭಾರಿ ಮಳೆ ಹಿನ್ನೆಲೆ ಭದ್ರಾ ನದಿಯ ಹರಿವಿನಲ್ಲಿ ಭಾರಿ ಏರಿಕೆಯಾಗಿದೆ. ಜಾಂಬಳೆ ಸಮೀಪ ರಸ್ತೆಯ ಮೇಲೆ ಭದ್ರಾ ನದಿ ನೀರು ಹರಿಯುತ್ತಿದ್ದು, ನೀರಿನ ನಡುವೆ ವಾಹನಗಳು ಸಂಚರಿಸುತ್ತಿವೆ.

ಇದನ್ನೂ ಓದಿ:ಉತ್ತರಕನ್ನಡದಲ್ಲಿ ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ನದಿಗಳು.. ಕದ್ರಾ ಜಲಾಶಯದಿಂದ 3ನೇ ದಿನವೂ ನೀರು ಬಿಡುಗಡೆ

ABOUT THE AUTHOR

...view details