ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಬಯಲು ಸೀಮೆ ಪ್ರದೇಶಗಳಾದ ಕಡೂರು ತಾಲೂಕಿನ ಗಡಿ ಭಾಗದ ಹಡಗಲು ತಿಮ್ಮಾಪುರ, ಕಳ್ಳಿಹೊಸಳ್ಳಿ, ಕಲ್ಕೆರೆ ಭಾಗದಲ್ಲಿ ಒಂದು ಕಾಲದಲ್ಲಿ ಮಳೆಗಾಲದಲ್ಲೂ ಕೂಡ ನೀರಿನ ಬವಣೆ ಹೇಳತೀರದಾಗಿತ್ತು.
ಕುಡಿಯುವ ನೀರಿಗೆ ಟ್ಯಾಂಕರ್ ನೀರೇ ಗತಿಯಾಗಿದ್ದ ಈ ಬಯಲುಸೀಮೆಯ ಹಳ್ಳಿಗಳಲ್ಲೀಗ ಕಣ್ಣಾಯಿಸಿದಲ್ಲೆಲ್ಲಾ ನೀರೇ ನೀರು. ಭದ್ರಾ ಮೇಲ್ದಂಡೆ ಯೋಜನೆ ನಾಲೆಯ ಎರಡೂ ಬದಿಯ ತಡೆಗೋಡೆಗಳು ಕೊಚ್ಚಿ ಹೋಗುತ್ತಿವೆ. ಜಮೀನುಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.
ದೂರದ ಚಿತ್ರದುರ್ಗ ಜಿಲ್ಲೆಯ ವಾಣಿವಿಲಾಸ ಸಾಗರಕ್ಕೆ ನೀರು ಹರಿಸುವ ಈ ಕಾಲುವೆ ಕೋಲಾರ, ಚಿತ್ರದುರ್ಗ, ತುಮಕೂರಿನ ಜನರ ಪಾಲಿಗೆ ಜೀವನದಿಯಾದ್ರೆ ಕಡೂರು ತಾಲೂಕಿನ ಬಯಲು ಸೀಮೆಯ ಜನರ ಪಾಲಿಗೆ ಇದು ಪ್ರತಿನಿತ್ಯ ಜೀವಭಯ ಸೃಷ್ಟಿಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳು ಕುಕ್ಕ ಸಮುದ್ರ ಕೆರೆಗೆ ನೀರು ಹರಿಸುವಲ್ಲಿ ಎಡವಿದ್ರು. ಪೈಪ್ಲೈನ್ನಲ್ಲಿ ನೀರು ಹರಿಸುವ ಬದಲು ಹಳ್ಳದಲ್ಲೇ ನೀರುಬಿಟ್ಟು ಅಧಿಕಾರಿಗಳು ತಮ್ಮ ಕೈ ತೊಳೆದುಕೊಂಡ್ರು. ಹಳ್ಳದ ಮೂಲಕ ನೀರು ಹರಿಸುವ ವೇಳೆ ಸ್ಥಳೀಯರು ವಿರೋಧಿಸಿದ್ದಾರೆ.