ಚಿಕ್ಕಮಗಳೂರು:ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಶೃಂಗೇರಿಯಲ್ಲಿ ತುಂಗಾನದಿಯ ಹರಿವಿನ ಮಟ್ಟದಲ್ಲಿ ಹೆಚ್ಚಳ ಉಂಟಾಗಿದೆ. ಶೃಂಗೇರಿ ಪೀಠದ ಗುರು ನಿವಾಸಕ್ಕೆ ಹೋಗುವ ರಸ್ತೆ ಕೂಡ ಜಲಾವೃತವಾಗಿದೆ. ಅಷ್ಟೇ ಅಲ್ಲದೇ, ನದಿಯ ಪ್ರವಾಹಕ್ಕೆ ಕಾರೊಂದು ಮುಳುಗಡೆಯಾಗಿದೆ.
ಶೃಂಗೇರಿ ಮಠದ ಭೋಜನ ಶಾಲೆಗೆ ನೀರು ನುಗ್ಗುತ್ತಿದ್ದು, ಗಾಂಧಿ ಮೈದಾನ ಸಂಪೂರ್ಣ ನೀರಿನಿಂದ ಜಲಾವೃತವಾಗಿದೆ. ಈ ಭಾಗದಲ್ಲಿ ರಸ್ತೆಗಳ ಮೇಲೆ ನೀರು ಹರಿಯುತ್ತಿದೆ. ಇನ್ನು ಕಳೆದ ರಾತ್ರಿಯಿಂದಲೇ ತುಂಗಾನದಿ ಉಕ್ಕಿ ಹರಿಯುತ್ತಿದ್ದು, ಶೃಂಗೇರಿ ನಗರದ ಹಲವು ಮನೆಗಳು ಜಲಾವೃತವಾಗಿವೆ. ಮಂಗಳೂರು - ಶೃಂಗೇರಿ ಹೆದ್ದಾರಿ ಬಂದ್ ಆಗಿದ್ದು, ಬೆಳಗ್ಗೆಯಿಂದಲೂ ಪ್ರಯಾಣಿಕರು ಪರದಾಟ ನಡೆಸಿದ್ದು, ಅಗತ್ಯ ವಸ್ತುಗಳ ಸಾಗಣೆಗೆ ಮಳೆ ಅಡ್ಡಿ ಪಡಿಸುತ್ತಿದೆ.
ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ತುಂಗಾನದಿ ಇನ್ನು ಶೃಂಗೇರಿ ನಗರದಲ್ಲಿ ತುಂಗೆಯ ರಭಸಕ್ಕೆ ಹಲವು ಪ್ರದೇಶಗಳು ಮುಳುಗಡೆಯಾಗಿದ್ದು, ಶಾರದಾ ಬೀದಿಯ ಅಕ್ಕ ಪಕ್ಕದ ರಸ್ತೆಗಳು ಸಂಪೂರ್ಣ ಜಲಾವೃತವಾಗಿದೆ. ಕುರುಬರಹಳ್ಳಿ ಮನೆಗಳಿಗೆ ನೀರು ನುಗ್ಗುತ್ತಿದ್ದು, ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆ ತರಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಈ ಭಾಗದಲ್ಲಿ ಬೋಟ್ ಬಳಸಿ, ಸುರಕ್ಷಿತ ಸ್ಥಳಗಳಿಗೆ ಜನರನ್ನು ಸಿಬ್ಬಂದಿ ಕರೆದುಕೊಂಡು ಹೋಗುತ್ತಿದ್ದಾರೆ.
ಶುಂಠಿ ಬೆಳೆ ನಾಶ:
ಮೂಡಿಗೆರೆ ತಾಲೂಕಿನ ಕಿರುಗುಂದ ಗ್ರಾಮದಲ್ಲಿ ನಿರಂತರ ಮಳೆಯಿಂದ ಲಕ್ಷಾಂತರ ಮೌಲ್ಯದ ಶುಂಠಿ ಬೆಳೆ ಕೊಚ್ಚಿ ಹೋಗಿದೆ. ನೀರಿನಲ್ಲಿ ತೇಲಿ ಕೊಂಡು ಹೋಗುತ್ತಿರುವ ಶುಂಠಿಯ ಬೆಳೆಯನ್ನು ರೈತರು ಆರಿಸಿಕೊಂಡು ತರುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಸಲುಹಿದ ಬೆಳೆಗಳು ಕಣ್ಣೆದುರೆ ನಾಶವಾಗುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ.