ಚಿಕ್ಕಮಗಳೂರು : ಮಲೆನಾಡು ಭಾಗದಲ್ಲಿ ಮಳೆರಾಯನ ಆರ್ಭಟ ಮುಂದುವರಿದಿದೆ. ಶೃಂಗೇರಿ ತಾಲೂಕಿನ ಮೆಗಲು ಬೈಲು ಗ್ರಾಮದಲ್ಲಿ ಮನೆಯೊಂದರ ಸಮೀಪವೇ ಭೂಮಿ ಕುಸಿದಿದ್ದು, ಆರು ಮನೆಗಳಿಗೆ ಆತಂಕ ಎದುರಾಗಿದೆ. ಉತ್ತಮೇಶ್ವರ ರಸ್ತೆ ಕಾಮಗಾರಿ ಇಲಾಖೆಯಿಂದ ಗ್ರಾಮ ಸಡಖ್ ಯೋಜನೆಯಲ್ಲಿ ರಸ್ತೆ ನಿರ್ಮಾಣ ಮಾಡುವಾಗ ಇಲ್ಲಿ ಮಣ್ಣು ತೆಗೆಯಲಾಗಿತ್ತು. ಇದೇ ರಸ್ತೆಯ ಮತ್ತೊಂದು ಕಡೆ ಕುಸಿತ ಉಂಟಾಗಿದೆ. ಸ್ಥಳಕ್ಕೆ ಶೃಂಗೇರಿ ತಹಶೀಲ್ದಾರ್ ಗೌರಮ್ಮ ಹಾಗೂ ಅರ್.ಐ ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಲಸಿನ ಮರ ಬಿದ್ದು ನೆಲಕಚ್ಚಿದ ಕೊಟ್ಟಿಗೆ : ಇನ್ನೊಂದೆಡೆ, ಕೊಪ್ಪ ತಾಲೂಕಿನ ಕೂಳೂರು ಸಮೀಪದ ಮಡುವಿನಕೆರೆ ಗ್ರಾಮದಲ್ಲಿ ಮಳೆ, ಗಾಳಿಗೆ ಮನೆಯ ಮೇಲೆ ಬೃಹತ್ ಗಾತ್ರದ ಹಲಸಿನ ಮರ ಬಿದ್ದಿದೆ. ಮರ ಬಿದ್ದ ಪರಿಣಾಮ ನಾರಾಯಣ ಎಂಬುವರ ಕೊಟ್ಟಿಗೆ ಸಂಪೂರ್ಣ ನೆಲಕಚ್ಚಿದ್ದು, ಮನೆಯ ಅರ್ಧ ಭಾಗಕ್ಕೆ ಹಾನಿಯಾಗಿದೆ. ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸೇರಿದಂತೆ ಅಪಾರ ಪ್ರಮಾಣದ ಹಾನಿಯಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕಾಲುಸಂಕ ಮುಳುಗಡೆ : ಭದ್ರಾ ನದಿಯ ಹರಿವಿನಲ್ಲಿ ಹೆಚ್ಚಳ ಉಂಟಾಗಿದ್ದು, ಕಳಸ ತಾಲೂಕಿನ ಕಗ್ಗನಹಳ್ಳ ಗ್ರಾಮದ ಕಾಲುಸಂಕ ಸಂಪೂರ್ಣ ಮುಳುಗಡೆಯಾಗಿದೆ. ಪರಿಣಾಮ, ಶಾಲಾ ಮಕ್ಕಳು, ವೃದ್ಧರು, ತೋಟದ ಕಾರ್ಮಿಕರಿಗೆ ತೊಂದರೆಯಾಗಿದೆ. ಕಗ್ಗನಹಳ್ಳದಿಂದ ಹೊಳಲು, ಬಾಳೆಹೊಳೆ ಎಸ್ಟೇಟ್, ಬಿಳುಗೂರು, ಬರ್ಗಲ್, ಹೆಮ್ಮಕ್ಕಿ, ಗಬ್ಗಲ್ ಗ್ರಾಮಗಳ ಸಂಪೂರ್ಣ ಸಂಪರ್ಕ ಕಡಿತವಾಗಿದೆ. ಕಳೆದ ಕೆಲ ವರ್ಷಗಳಿಂದ ಈ ಭಾಗಕ್ಕೆ ಸೇತುವೆ ಮಾಡಿಕೊಡಿ ಎಂದು ಗ್ರಾಮಸ್ಥರು ಮನವಿ ಸಲ್ಲಿಸುತ್ತಿದ್ದರೂ ಸಹ ಜಿಲ್ಲಾಡಳಿತ ಹಾಗೂ ಜನ ಪ್ರತಿನಿಧಿಗಳು ಮಾತ್ರ ಸ್ಪಂದಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.