ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು: 3 ದಿನ ಭಾರಿ ಮಳೆ ಮುನ್ಸೂಚನೆ; 5 ಹೋಬಳಿ ವ್ಯಾಪ್ತಿಯ ಶಾಲೆಗಳಿಗೆ ಇಂದು ರಜೆ - heavy rain in karanatak

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಇಂದು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಚಿಕ್ಕಮಗಳೂರಲ್ಲಿ ಬಾರೀ ಮಳೆ
ಚಿಕ್ಕಮಗಳೂರಲ್ಲಿ ಬಾರೀ ಮಳೆ

By

Published : Jul 7, 2023, 8:15 AM IST

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದೆ. ಒಂದೆಡೆ ಗುಡುಗು, ಮಿಂಚು ಸಹಿತ ಮಳೆಯಾಗುತ್ತಿದ್ದರೆ ಮತ್ತೊಂದೆಡೆ, ಗಾಳಿ ಸಹಿತ ಭಾರಿ ಮಳೆ ಸುರಿಯುತ್ತಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಣಕಲ್‌, ಬಾಳೂರು, ದೇವರಮನೆ, ಗುತ್ತಿ, ಕುಂದೂರು, ಮತ್ತಿಕಟ್ಟೆ, ಜಾಣಿಗೆಯಲ್ಲಿ ಮರಗಳು ಧರೆಗುರುಳಿವೆ. ಶೃಂಗೇರಿ, ಕೊಪ್ಪ ಹಾಗೂ ಮೂಡಿಗೆರೆಯಲ್ಲಿ ಬಿಡುವಿಲ್ಲದೆ ಮಳೆ ಸುರಿಯುತ್ತಿದೆ. ಎನ್‌.ಆರ್‌. ಪುರ, ಚಿಕ್ಕಮಗಳೂರಿನಲ್ಲಿ ತುಂತುರು ಮಳೆ ಬಿದ್ದಿದ್ದು, ತರೀಕೆರೆ, ಅಜ್ಜಂಪುರ ಹಾಗೂ ಕಡೂರು ತಾಲೂಕಿನ ಕೆಲವೆಡೆ ಸಾಧಾರಣ ಮಳೆಯಾಗಿದೆ. ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ.

3 ದಿನ ಭಾರಿ ಮಳೆ ಸಾಧ್ಯತೆ, ಆರೆಂಜ್‌ ಅಲರ್ಟ್‌ : ಕಳೆದ 24 ಗಂಟೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಜಿಲ್ಲೆಯ ಸರಾಸರಿ ವಾಡಿಕೆ ಮಳೆ 19.8 ಮಿ.ಮೀ. ಆದರೆ ಕಳೆದ 24 ಗಂಟೆಯಲ್ಲಿ 21.8 ಮಿ.ಮೀ. ಮಳೆ ಆಗಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ 16.5, ಕಡೂರು 3.5, ಕೊಪ್ಪ 48.7, ಮೂಡಿಗೆರೆ 48.8, ಎನ್‌.ಆರ್‌. ಪುರ 17.6, ಶೃಂಗೇರಿ 53.3, ತರೀಕೆರೆ 5.0, ಅಜ್ಜಂಪುರ ತಾಲೂಕಿನಲ್ಲಿ 2.6 ಮಿ.ಮೀ. ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮಲೆನಾಡು ಭಾಗದಲ್ಲಿ ಮುಂದಿನ 3 ದಿನಗಳ ಕಾಲ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ.

ಜಿಲ್ಲೆಗೆ ಮೂರು ದಿನ ಆರೆಂಜ್‌ ಅಲರ್ಟ್​ ಘೋಷಿಸಲಾಗಿದ್ದು, ವ್ಯಾಪಕವಾಗಿ ಮಳೆಯಾಗುವ ಸಾಧ್ಯತೆ ಇದೆ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಿಗೆ ಸೂಚನೆಗಳನ್ನು ನೀಡಿದೆ. ಸ್ಥಳೀಯರು, ಪ್ರವಾಸಿಗರು ನದಿ ಅಥವಾ ತಗ್ಗು ಪ್ರದೇಶಗಳಿಗೆ ತೆರಳದಂತೆ, ವಿದ್ಯುತ್‌ ಕಂಬ, ಹಳೆಯ ಕಟ್ಟಡ, ಮರಗಳ ಕೆಳಗೆ ನಿಲ್ಲದಂತೆ, ಕೆರೆ, ನದಿ ತೀರಕ್ಕೆ ಹೋಗದಂತೆ ಜಾಗ್ರತೆ ವಹಿಸಿ ಅಪಾಯಕಾರಿ ಘಟನೆಗಳಿಗೆ ಅವಕಾಶ ಕೊಡದಂತೆ ಜಿಲ್ಲಾಡಳಿದೊಂದಿಗೆ ಸಹಕಾರ ನೀಡಲು ತಿಳಿಸಿದೆ.

ಇಂದು ಶಾಲೆಗಳಿಗೆ ರಜೆ ಘೊಷಣೆ:ಚಿಕ್ಕಮಗಳೂರು ತಾಲ್ಲೂಕಿನ 5 ಹೋಬಳಿಗಳ ವ್ಯಾಪ್ತಿಯಲ್ಲಿ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ. ಆಲ್ದೂರು, ಅವತಿ, ಖಾಂಡ್ಯ, ವಸ್ತಾರೆ ಮತ್ತು ಜಾಗರ ಹೋಬಳಿಗಳ ವ್ಯಾಪ್ತಿಯಲ್ಲಿ ರಜೆ ಇರಲಿದೆ.

ಕಳಸ, ಕುದುರೆಮುಖ ರಸ್ತೆಯಲ್ಲಿ ಬಿರುಕು :ನಿರಂತರ ಮಳೆಯಿಂದಾಗಿ ಕಳಸ- ಕುದುರೆಮುಖ- ಮಂಗಳೂರು ಸಂಪರ್ಕಿಸುವ ಹೆದ್ದಾರಿಯಲ್ಲಿ ಬಿರುಕು ಕಂಡುಬಂದಿದ್ದು, ಗುಡ್ಡ ಕುಸಿತದ ಆತಂಕ ಎದುರಾಗಿದೆ. ಕಳಸದಿಂದ 1 ಕಿ.ಮೀ. ದೂರದಲ್ಲಿ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಕಳೆದ ವರ್ಷ ರಸ್ತೆ ಕುಸಿತ ಕಂಡಿದ್ದ ಸ್ಥಳದಲ್ಲಿಯೇ ಈ ವರ್ಷವೂ ಘಟನೆ ಸಂಭವಿಸಿದೆ.

ಇದನ್ನೂ ಓದಿ:ಧಾರಾಕಾರ ಮಳೆ: ದಕ್ಷಿಣ ಕನ್ನಡದಲ್ಲಿ ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ, ಶಾಲಾ ಕಾಲೇಜಿಗೆ ರಜೆ ಘೋಷಣೆ

ABOUT THE AUTHOR

...view details