ಚಿಕ್ಕಮಗಳೂರು/ಹಾಸನ :ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಮತ್ತೊಂದು ಮೃತದೇಹ ಪತ್ತೆಯಾಗಿದೆ. ನಿರಂತರ ಮಳೆಯ ಕಾರಣ ಹಾಗೂ ಗುಡ್ಡು ಕುಸಿತದಿಂದ ಹಲವಾರು ಜನರು ನೀರಿನಲ್ಲಿ ನಾಪತ್ತೆಯಾಗಿದ್ದರು. ಇದರಲ್ಲಿ ಕೆಲವರು ಪತ್ತೆಯಾದರೇ, ಇನ್ನು ಕೆಲವರು ಪತ್ತೆಯಾಗಿಲ್ಲ.
ಮೂಡಿಗೆರೆಯ ಕಿರುಗುಂದದ ಸಮೀಪ ಜಪಾವತಿಯ ಪಕ್ಕದ ಗದ್ದೆಯ ಕೆಸರಿನಲ್ಲಿ ಮೃತ ದೇಹಪತ್ತೆಯಾಗಿದೆ. ಮೃತ ವ್ಯಕ್ತಿ ಸಕಲೇಶಪುರ ತಾಲೂಕಿನ ಕೊರಡಿ ಗ್ರಾಮದ ಪ್ರಕಾಶ್ ಎಂದು ಹೇಳಲಾಗುತ್ತಿದೆ. ಸ್ಥಳೀಯ ಜನರು ಕೆಸರಿನಲ್ಲಿ ಹೂತಿದ್ದ ದೇಹವನ್ನು ಮೇಲೆತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ.
ಒಬ್ಬ ಬಲಿ, ಇನ್ನೋರ್ವ ನಾಪತ್ತೆ :
ಜಿಲ್ಲೆಯಲ್ಲಿ ಸುರಿದ ಮಹಾಮಳೆಗೆ ಸಕಲೇಶಪುರ ತಾಲೂಕಿನ ಹಾನುಬಾಳ್ ಹೋಬಳಿಯ ಕೊರಡಿ ಗ್ರಾಮದ 61 ವರ್ಷದ ಪ್ರಕಾಶ್ ಎಂಬುವವರು ಮೃತಪಟ್ಟಿದ್ದಾರೆ. ಕಳೆದ 8ನೇ ತಾರೀಖಿನಂದು ಮಧ್ಯಾಹ್ನದ ಸಮಯ ಗದ್ದೆಗೆ ಹೋಗಿದ್ದ ಪ್ರಕಾಶ್ ಕಾಲು ಜಾರಿ ಚಿಕ್ಕಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ರಕ್ಷಣಾ ತಂಡ ಕಾರ್ಯಾಚರಣೆ ನಡೆಸಿದ್ದು, ಗದ್ದೆಯ ಸಮೀಪದ ಹೇಮಾವತಿ ತೊರೆಯ ಹತ್ತಿರವೇ ಮೃತದಹ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆ ಮಾಡಿದ ನಂತರ ಮೃತರ ಶವ ಕುಟುಂಬದವರಿಗೆ ಒಪ್ಪಿಸಲಾಗಿದೆ.
ಅದೆ ರೀತಿ, ತಾಲೂಕಿನ ದೇವಾಲಯದ ಕೆರೆ ಸಮೀಪದ ಮರಗಡಿ ಗ್ರಾಮದ 60 ವರ್ಷದ ರೈತ ರಮೇಶ್ ಎಂಬುವರು ಕಳೆದ 7 ನೇ ತಾರೀಖಿನಂದು ಹಾಲು ಕೊಟ್ಟು ಬರಲು ತೆರಳಿದಾಗ ನಾಪತ್ತೆಯಾಗಿದ್ದರು. ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.