ಚಿಕ್ಕಮಗಳೂರು:ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ನಿರಂತರ ಮಳೆ ಸುರಿಯುತ್ತಿರುವುದರಿಂದ ಐದು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ತಾಲೂಕಿನ ಕಟ್ಟೆ ಹೊಳೆ ಹಳ್ಳ ತುಂಬಿ ಹರಿಯುತ್ತಿದ್ದು, ರಸ್ತೆ ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾಗಿದೆ.
ಕಾಫಿನಾಡಲ್ಲಿ ವರುಣನ ಆರ್ಭಟ, ನದಿಗಳ ಭೋರ್ಗರೆತ: ಜನಜೀವನ ಅಸ್ತವ್ಯಸ್ತ - Heavy Rain at Chikkamgaluru latest
ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ನದಿಗಳು ತುಂಬಿ ಹರಿಯುತ್ತಿವೆ. ಭಾರಿ ಮಳೆಯ ಪರಿಣಾಮ ಜಮೀನುಗಳಿಗೆ ನೀರು ನುಗ್ಗಿದ್ದು, ರೈತರು ಬೆಳೆದ ಬೆಳೆಗಳು ನೀರುಪಾಲಾಗಿವೆ. ಇನ್ನು ಜಿಲ್ಲೆಯ ಹಲವೆಡೆ ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಗಿದೆ.
ಇನ್ನೊಂದೆಡೆ ತಾಲೂಕಿನ ದಂದೂರಿನಲ್ಲಿ ನಿರಂತರ ಮಳೆ ಪರಿಣಾಮ 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗಿದ್ದು, ಪಂಪ್ ಬಳಸಿ ಜನರು ನೀರನ್ನು ಹೊರಹಾಕುತ್ತಿದ್ದಾರೆ. ಇನ್ನು ತರೀಕೆರೆ ರೈಲ್ವೆ ಅಂಡರ್ ಪಾಸ್ಗೆ ದೊಡ್ಡ ಕೆರೆಯ ನೀರು ನುಗ್ಗಿ, ವಾಹನ ಸವಾರರು ಪರದಾಡುವಂತಾಗಿದೆ. ನಂದಿಪುರ ಗ್ರಾಮದಲ್ಲಿ ಭಾರಿ ಮಳೆಗೆ ಕಿರು ಸೇತುವೆ ಕೊಚ್ಚಿ ಹೋಗಿದ್ದು, ರೈತರು ಬೆಳೆದಿದ್ದ ಈರುಳ್ಳಿ ಬೆಳೆ ನಾಶವಾಗಿದೆ. ಇನ್ನು ಮಳೆಯ ಅವಾಂತರ ಇಷ್ಟು ಜೋರಾಗಿದ್ದರೂ ಯಾವುದೇ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಡೂರು ತಾಲೂಕಿನ ಕರಿಕಲ್ಲು, ವೇದಾವತಿ ನದಿಗಳು ತುಂಬಿ ಹರಿಯುತ್ತಿವೆ. ಶಂಕರಪುರ ಗ್ರಾಮದಲ್ಲಿ ಮಳೆಯ ಆರ್ಭಟಕ್ಕೆ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ರಾಗಿ ಬೆಳೆ ನಾಶವಾಗಿದೆ. ತಾಲೂಕಿನ ನರಸೀಪುರ ಗ್ರಾಮದಲ್ಲಿ ಭಾರಿ ಮಳೆಗೆ ದನದ ಕೊಟ್ಟಿಗೆ ಕುಸಿದು ಬಿದ್ದಿದ್ದು, ಕೊಟ್ಟಿಗೆಯಲ್ಲಿ ಸಿಲುಕಿದ್ದ 6 ಜಾನುವಾರುಗಳನ್ನು ಸ್ಥಳೀಯರು ರಕ್ಷಿಸಿದ್ದಾರೆ.