ಚಿಕ್ಕಮಗಳೂರು:ಜಿಲ್ಲೆಯ ಕಳಸದ ಎಸ್.ಕೆ.ಮೇಗಲ್ ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾದ ರೈತನ ಮನೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.
ನೆರೆ ಪರಿಹಾರ ವಿಳಂಬದಿಂದ ಮನ ನೊಂದು ಮೂರು ದಿನಗಳ ಹಿಂದೆ ಚಂದ್ರೇಗೌಡ ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಅವರು, ಚಂದ್ರೇಗೌಡ ಅವರ ಪತ್ನಿ ಹೇಮಾವತಿಗೆ ₹ 2 ಲಕ್ಷದ ಚೆಕ್ ವಿತರಿಸಿದರು. ತಹಶೀಲ್ದಾರ್ಗೆ ಕರೆ ಮಾಡಿದ್ದೇನೆ. ನಾಳೆಯೊಳಗೆ ರಾಜ್ಯ ಸರ್ಕಾರ ಪರಿಹಾರ ಹಣ ಬಿಡುಗಡೆ ಮಾಡಲಿದೆಎಂದು ಭರವಸೆ ಕೊಟ್ಟರು.
ರೈತರ ಮನೆಗೆ ಹೆಚ್ಡಿಕೆ ಭೇಟಿ ನಂತರ ಕಳಸದ ಕಾರ್ಗದ್ದೆ ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾದ ಮತ್ತೊಬ್ಬ ರೈತನ ಮನೆಗೆ ಭೇಟಿ ನೀಡಿದರು. 20 ದಿನದ ಹಿಂದೆ ಚನ್ನಪ್ಪಗೌಡ ಎಂಬವರು ಆತ್ಮಹತ್ಯೆಗೆ ಶರಣಾಗಿದ್ದರು. ಚನ್ನಪ್ಪಗೌಡ ಅವರ ಪತ್ನಿ ಸೀತಾರತ್ನಾಗೆ ಸಮಾಧಾನ ಹೇಳಿ ₹ 1 ಲಕ್ಷದ ಚೆಕ್ ವಿತರಿಸಿ ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಧೈರ್ಯ ಹೇಳಿದರು.
ಚಂದೇಗೌಡ ಅವರ ಅರ್ಧ ಎಕರೆ ಭತ್ತದ ಗದ್ದೆ ಮತ್ತು ಅರ್ಧ ಎಕರೆ ಕಾಫಿ ತೋಟ ನೆರೆಯಿಂದ ಹಾಳಾಗಿತ್ತು. ತೋಟ ಸರಿಪಡಿಸಲು ಕೈ ಸಾಲ ಮಾಡಿಕೊಂಡಿದ್ದರು. ಆದರೆ, ಈವರೆಗೂ ಸರ್ಕಾರ ಯಾವುದೇ ನೆರೆ ಪರಿಹಾರ ವಿತರಿಸಿರಲಿಲ್ಲ. ಇದರಿಂದ ಮನ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.