ಚಿಕ್ಕಮಗಳೂರು: ಸುಮಾರು ಎರಡು ದಶಕಗಳ ಕಾಲ ದೇಶದ ಸೇವೆ ಸಲ್ಲಿಸಿ, ಸ್ವಗ್ರಾಮಕ್ಕೆ ಮರಳಿದ ನಿವೃತ್ತ ಯೋಧನಿಗೆ ಅದ್ಧೂರಿ ಸ್ವಾಗತ ಕೋರಲಾಯಿತು.
ಯೋಧನೋರ್ವ 21 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿದ ಬಳಿಕ ಸ್ವಗ್ರಾಮಕ್ಕೆ ಮರಳುತ್ತಿದ್ದಾರೆ ಎಂಬ ವಿಚಾರ ತಿಳಿದ ಊರಿನ ಯುವಕರು ಆತನ ಬರುವಿಕೆಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದರು. ಸೇವೆ ಮುಗಿಸಿ ಬಂದ ಹೆಮ್ಮೆಯ ಪುತ್ರನಿಗೆ ಸ್ವಾಗತ ಕೋರಿದ ಪರಿಯೇ ವಿಭಿನ್ನವಾಗಿತ್ತು.
ತೆರೆದ ಪಿಕಪ್ ವಾಹನವನ್ನು ಶೃಂಗಾರ ಮಾಡಿರುವ ಗ್ರಾಮಸ್ಥರು, ಆ ವಾಹನದಲ್ಲಿ ಯೋಧನ ಮೆರವಣಿಗೆ ಮಾಡಿ ಹೂಗುಚ್ಛ ನೀಡಿ ಅದ್ಧೂರಿ ಸ್ವಾಗತ ಕೋರಿದರು. ಗ್ರಾಮದ ದ್ವಾರ ಬಾಗಿಲಿನಿಂದ ಇಡೀ ಗ್ರಾಮದಾದ್ಯಂತ ಮೆರವಣಿಗೆ ಮಾಡಿದರು. ಯೋಧ ಚಂದ್ರಶೇಖರ್ ಗ್ರಾಮಕ್ಕೆ ಬರುತ್ತಿದ್ದಂತೆ ಗ್ರಾಮಸ್ಥರು, ಶಾಲಾ ಮಕ್ಕಳು ಜೈಕಾರ ಕೂಗಿದರು. ಅಲ್ಲದೆ ಅವರ ಬಾಲ್ಯ ಸ್ನೇಹಿತರು ತಬ್ಬಿ ಸಂತೋಷದಿಂದ ಸಂಭ್ರಮಿಸಿದರು. ಇಂತಹ ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಗಿದ್ದು ಚಿಕ್ಕಮಗಳೂರಿನ ಕಡೂರು ತಾಲೂಕಿನ ಎಸ್.ಬಿದರೆ ಗ್ರಾಮ.