ಚಿಕ್ಕಮಗಳೂರು:ಎಂ.ಕೆ.ಪ್ರಾಣೇಶ್ ಅವರು ವಿಧಾನ ಪರಿಷತ್ ಉಪ ಸಭಾಪತಿಯಾಗಿ ಆಯ್ಕೆಯಾದ ನಂತರ ಮೂಡಿಗೆರೆ ತಾಲೂಕಿಗೆ ಮಂಗಳವಾರ ಆಗಮಿಸಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ನೆರೆದಿದ್ದ ನೂರಾರು ಕಾರ್ಯಕರ್ತರು ಪ್ರಾಣೇಶ್ ಆಗಮಿಸುತ್ತಿದ್ದಂತೆ ಜೈಕಾರ ಹಾಕಿ ಸಂಭ್ರಮಿಸಿದರು. ಹೂವಿನ ಹಾರ, ಹೂಮಳೆ ಸುರಿಸಿ ಅಭಿಮಾನ ಮೆರೆದರು.
ನಂತರ ಮೂಡಿಗೆರೆಯ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲು ಪ್ರಾಣೇಶ್‌ರನ್ನು ಹೊತ್ತು ಸಾಗಿದರು. ಪಕ್ಷದ ಕಾರ್ಯಕರ್ತರು ಮತ್ತು ಪ್ರಾಣೇಶ್ ಅನುಯಾಯಿಗಳು ತಮಟೆ ಸದ್ದಿಗೆ ಕುಣಿದರು. ಇದು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರ ಜಯ. ನಾನು ಕಾರ್ಯಕರ್ತರೊಂದಿಗೆ ನಡಿಗೆಯಲ್ಲಿ ಸಾಗುತ್ತೇನೆಂದು ಹೇಳಿ ರಥದಿಂದ ಕೆಳಗಿಳಿದ ಅವರು ಮೆರವಣಿಗೆಯಲ್ಲಿ ಸಾಗಿದರು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿದ್ದು, ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.