ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರಲ್ಲಿ ಚುನಾವಣೆಯಿಂದ ದೂರವಿರಲು ನಿರ್ಧರಿಸಿದ ನೂರಾರು ಗ್ರಾಮಗಳು... ಕಾರಣ? - ಕಸ್ತೂರಿ ರಂಗನ್ ವರದಿ ಯೋಜನೆ

ಕಸ್ತೂರಿ ರಂಗನ್ ವರದಿ, ಹುಲಿ ಯೋಜನೆ, ಪರಿಸರ ಸೂಕ್ಷ್ಮವಲಯ ಸೇರಿದಂತೆ ಕೆಲ ಯೋಜನೆಗಳ ಅಭಿವೃದ್ಧಿ ಕುಂಠಿತಗೊಂಡಿರುವ ಕಾರಣ ಚಿಕ್ಕಮಗಳೂರಿನ ನೂರಾರು ಗ್ರಾಮಗಳು ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಲು ಮುಂದಾಗಿವೆ.

Gram Panchayat elections boycott in chikkamagaluru district
ಗ್ರಾಪಂ ಚುನಾವಣೆ ಬಹಿಷ್ಕಾರಕ್ಕೆ ಮುಂದಾದ ಗ್ರಾಮಗಳು

By

Published : Dec 11, 2020, 9:03 PM IST

ಚಿಕ್ಕಮಗಳೂರು:ಜನಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸಲು ಇರುವ ಪ್ರಮುಖ ಅಸ್ತ್ರ ಎಂದರೆ ಚುನಾವಣಾ ಬಹಿಷ್ಕಾರ. ಅಂತಹ ಸಂದರ್ಭಗಳಲ್ಲಿ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ದೊರೆತಿವೆ. ಪ್ರತಿ ಸಲದಂತೆ ಈ ಬಾರಿಯೂ ಅಭ್ಯರ್ಥಿಗಳು ಕೊಡುವ ಹುಸಿ ಭರವಸೆಗಳಿಗೆ ಮೋಸ ಹೋಗಬಾರದು ಎಂಬ ಉದ್ದೇಶದಿಂದ ಕಾಫಿನಾಡಲ್ಲಿ ಬಹುತೇಕ ಗ್ರಾಮಗಳು ಗ್ರಾಪಂ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿವೆ.

ಕಾಫಿನಾಡಿನಲ್ಲಿ ಈ ಪರಿ ಚುನಾವಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಕಾರಣ ಕಸ್ತೂರಿ ರಂಗನ್ ವರದಿ, ಹುಲಿ ಯೋಜನೆ, ಪರಿಸರ ಸೂಕ್ಷ್ಮವಲಯ ಹಾಗೂ ಕೆಲ ಅಭಿವೃದ್ಧಿ ಯೋಜನೆಗಳ ಕುಂಠಿತ. ಪರಿಸರ ಉಳಿಸುವ ನೆಪದಲ್ಲಿ ತಲತಲಾಂತರಗಳಿಂದ ಕಟ್ಟಿಕೊಂಡಿರುವ ಬದುಕಿಗೆ ಎಳ್ಳುನೀರು ಬಿಡಲು ಮುಂದಾಗುತ್ತಿರುವ ವ್ಯವಸ್ಥೆ ವಿರುದ್ಧ ತಿರುಗಿ ಬೀಳುವ ಮೂಲಕ ಚುನಾವಣೆಯಿಂದ ದೂರವಿರಲು ಗ್ರಾಮಗಳು ನಿರ್ಧರಿಸಿವೆ.

ಕೇವಲ ಚುನಾವಣಾ ಬಹಿಷ್ಕಾರ ಮಾತ್ರವಲ್ಲ, ನಾಮಪತ್ರವನ್ನೇ ಯಾರೂ ಸಲ್ಲಿಸಬಾರದು ಎಂದು ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಕೆಲ ಗ್ರಾಮಗಳು ಎಚ್ಚರಿಕೆಯನ್ನೂ ನೀಡಿವೆ. ಹೀಗಾಗಿ ಎಷ್ಟೋ ಕಡೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲೂ ಹಿಂಜರಿಯುತ್ತಿದ್ದಾರೆ. ಪ್ರತಿ ಗ್ರಾಮದಲ್ಲೂ ಚುನಾವಣೆ ಬಹಿಷ್ಕಾರದ ಬ್ಯಾನರ್ ಹಾಕಿದ್ದಾರೆ. ಅಲ್ಲಲ್ಲಿ ಪಂಜಿನ ಮೆರಮಣಿಗೆಗಳೂ ನಡೆಯುತಿದೆ. ಹೀಗಾಗಿ ಇದು ಜಿಲ್ಲಾಡಳಿತಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಗ್ರಾಪಂ ಚುನಾವಣೆ ಬಹಿಷ್ಕಾರಕ್ಕೆ ಮುಂದಾದ ಗ್ರಾಮಗಳು

ಕಾಫಿನಾಡಿನಲ್ಲಿ ಕಸ್ತೂರಿ ರಂಗನ್ ವರದಿ ಯೋಜನೆ ವಿರೋಧಿ ಹೋರಾಟ ಸಮಿತಿ ಆಸ್ತಿತ್ವಕ್ಕೆ ಬಂದಿದ್ದು, ವಾಟ್ಸಪ್ ಗ್ರೂಪ್​​ನಲ್ಲೂ ಜನರನ್ನು ಎಚ್ಚರಿಸುವ ಕೆಲಸ ಮಾಡುತ್ತಿದೆ. ಎನ್.ಆರ್.ಪುರ, ಚಿಕ್ಕಮಗಳೂರು ತಾಲೂಕಿನ ಜನರಂತೂ ಅರಣ್ಯ ಇಲಾಖೆಯ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಈ ಮೂಲಕ ಜಿಲ್ಲೆಯ ನೂರಾರು ಹಳ್ಳಿಗಳಲ್ಲಿ ಚುನಾವಣೆ ಬಹಿಷ್ಕಾರದ ಕಹಳೆ ಮೊಳಗಿದೆ.

ಚಿಕ್ಕಮಗಳೂರು ತಾಲೂಕಿನ ಜಾಗರ, ಖಾಂಡ್ಯ, ಆವತಿ ಹೋಬಳಿಯ ಹತ್ತಾರೂ ಗ್ರಾಮ ಪಂಚಾಯಿತಿಗಳಲ್ಲಿ ಈವರೆಗೂ ನಾಮಪತ್ರ ಸಲ್ಲಿಸಲು ಅಭ್ಯರ್ಥಿಗಳು ಮನಸ್ಸು ಮಾಡಿಲ್ಲ. ಎನ್.ಆರ್. ಪುರ ತಾಲೂಕಿನ ಮಾಗುಂಡಿ, ಬಿ. ಕಣಬೂರು, ಬಾಳೆ, ಗಡಿಗೇಶ್ವರ ಹೋಬಳಿಯ ಎಲ್ಲಾ ಗ್ರಾಪಂಗಳಲ್ಲಿ ಚುನಾವಣೆ ಬಹಿಷ್ಕಾರ ಮಾಡಲಾಗಿದೆ. ಮೂಡಿಗೆರೆ ತಾಲೂಕಿನ ಊರುಬಗೆ ಗ್ರಾಪಂ ಸೇರಿದಂತೆ ಹಲವೆಡೆ ಬಹಿಷ್ಕಾರದ ಕಾವು ಜೋರಾಗಿದೆ.

ABOUT THE AUTHOR

...view details