ಚಿಕ್ಕಮಗಳೂರು:ಚಿಕ್ಕಮಗಳೂರಿನ ವಿವಾದಿತ ಧಾರ್ಮಿಕ ಕ್ಷೇತ್ರ ದತ್ತಾತ್ರೇಯ ಪೀಠಕ್ಕೆ ಆಡಳಿತ ಮಂಡಳಿಯನ್ನು ರಾಜ್ಯ ಸರ್ಕಾರ ನೇಮಕ ಮಾಡುವುದರ ಮೂಲಕ ಜನರಲ್ಲಿನ ಕುತೂಹಲಕ್ಕೆ ತೆರೆ ಎಳೆದಿದೆ.
ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತದ ತಪ್ಪಲಿನಲ್ಲಿರುವ ವಿವಾದಿತ ಧಾರ್ಮಿಕ ಕ್ಷೇತ್ರ, ಇನಾಂ ದತ್ತಾತ್ರೇಯ ಪೀಠವು ಹಿಂದೂಗಳದ್ದು ಹಾಗೂ ನಾಗೇನ ಹಳ್ಳಿಯಲ್ಲಿರುವ ದರ್ಗಾ ಮುಸಲ್ಮಾನರಿಗೆ ಸೇರಿದ್ದು ಎಂಬುದಾಗಿ ಸಂಘ ಪರಿವಾರವು ಈ ಹಿಂದಿನಿಂದಲೂ ವಾದಿಸಿತ್ತು.
ಇಂದು ಈ ಕುರಿತು ಸಚಿವ ಸಂಪುಟದಲ್ಲಿ ಮಹತ್ವದ ನಿರ್ಧಾರ ಕೈಗೊಂಡಿರುವ ರಾಜ್ಯ ಸರ್ಕಾರ, ದತ್ತಪೀಠಕ್ಕೆ ವ್ಯವಸ್ಥಾಪನಾ ಸಮಿತಿ ನೇಮಕ ಮಾಡಿ, ದತ್ತಾತ್ರೇಯ ಪೀಠಕ್ಕೆ ಆಡಳಿತ ಮಂಡಳಿಯನ್ನು ನೇಮಕಗೊಳಿಸಿದೆ. ದತ್ತಪಾದುಕೆ, ಅನುಸೂಯಾ ದೇವಿಯ ಪೂಜೆಗೆ ಅರ್ಚಕರ ನೇಮಕದ ಕುರಿತು ವ್ಯವಸ್ಥಾಪನಾ ಸಮಿತಿ ನಿರ್ಧರಿಸಲಿದೆ.
ಚಿಕ್ಕಮಗಳೂರು ತಾಲೂಕಿನ, ಇನಾಂ ದತ್ತಾತ್ರೇಯ ಪೀಠ ಗ್ರಾಮದ ಶ್ರೀ ಗುರು ದತ್ತಾತ್ರೇಯ ಬಾಬಬುಡನ್ಸ್ವಾಮಿ ದರ್ಗಾ/ಪೀಠ ಸಂಯುಕ್ತ ಅಧಿಸೂಚಿತ ಸಂಸ್ಥೆಗೆ ಈ ಕೆಳಕಂಡ ಎಂಟು ಜನರನ್ನು ವ್ಯವಸ್ಥಾಪನಾ ಸಮಿತಿಯ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯದತ್ತಿಗಳ ತಿದ್ದುಪಡಿ ಕಾಯ್ದೆ 2011ರ ಸೆಕ್ಷನ್ 25ರ ಅನ್ವಯ ಹಾಗೂ ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ರಿಟ್ ಅಪೀಲಿನ ಅಂತಿಮ ಆದೇಶಕ್ಕೆ ಒಳಪಟ್ಟು ಮೂರು ವರ್ಷಗಳ ಅವಧಿಗೆ ಷರತ್ತಿಗೊಳಪಡಿಸಿ ರಚಿಸಿ ಆದೇಶ ಹೊರಡಿಸಲಾಗಿದೆ.
ವ್ಯವಸ್ಥಾಪನಾ ಸಮಿತಿಗೆ ಸತೀಶ್ ಕೆ, ಲೀಲಾ ಸಿ.ಜೆ, ಶೀಲಾ ವೆಂಕಟೇಶ್, ಸುಮಂತ್ ಎನ್.ಎಸ್, ಕೆ.ಎಸ್ ಗುರುವೇಶ್, ಜಿ.ಹೆಚ್ ಹೇಮಂತ್ ಕುಮಾರ್, ಎಸ್.ಎಂ ಭಾಷಾ, ಸಿ.ಎಸ್ ಚೇತನ್ ಒಟ್ಟು ಎಂಟು ಜನ ಚಿಕ್ಕಮಗಳೂರಿನವರನ್ನು ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ:ದತ್ತಪೀಠ : ಫೆ.7ರಂದು ಸಚಿವ ಸಂಪುಟ ಉಪ ಸಮಿತಿಯಿಂದ ಸಾರ್ವಜನಿಕರ ಅಹವಾಲು ಸ್ವೀಕಾರ