ಚಿಕ್ಕಮಗಳೂರು: ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ತಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಜನಪ್ರತಿನಿಧಿಗಳ ಮನೆಯ ಬಾಗಿಲಿಗೆ ಅಲೆಯುತ್ತಿದ್ದಾರೆ. ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರದ ಗಮನ ಸೆಳೆಯುತ್ತಿದ್ದಾರೆ ಎಂದು ಚಿಕ್ಕಮಗಳೂರಿನಲ್ಲಿ ವಿಧಾನಪರಿಷತ್ ಸದಸ್ಯ ಎಸ್. ಎಲ್. ಭೋಜೇಗೌಡ ಹೇಳಿದ್ದಾರೆ.
ಸರ್ಕಾರ ಅತಿಥಿ ಉಪನ್ಯಾಸಕರಿಗೆ ವೇತನ ಬಿಡುಗಡೆ ಮಾಡಲಿ: ಎಸ್.ಎಲ್.ಭೋಜೇಗೌಡ - guest lecturers
ಕೋವಿಡ್ ಬಂದ ನಂತರ ಅತಿಥಿ ಉಪನ್ಯಾಸಕರಿಗೆ ಸರಿಯಾಗಿ ವೇತನ ಸಿಗುತ್ತಿಲ್ಲ. ಈ ಉಪನ್ಯಾಸಕರು ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವರಿಗೆ 12 ತಿಂಗಳು ವೇತನ ನೀಡಬೇಕು. ಅವರ ಎಲ್ಲ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಆಗ್ರಹಿಸಿದ್ದಾರೆ.
ನಮ್ಮ ಜಿಲ್ಲೆಯಲ್ಲಿಯೇ ಸಾಕಷ್ಟು ಅತಿಥಿ ಉಪನ್ಯಾಸಕರಿದ್ದಾರೆ. ಇಲ್ಲಿ ಶೇ80ರಷ್ಟು ಮಂದಿ ಇದೇ ರೀತಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಲೇಜಿನ ಉತ್ತಮ ಫಲಿತಾಂಶಕ್ಕೆ ಅವರು ಕಾರಣರಾಗುತ್ತಿದ್ದಾರೆ. ಆದ್ರೆ ಕೋವಿಡ್ ಬಂದ ನಂತರ ಅವರಿಗೆ ಸರಿಯಾಗಿ ವೇತನ ಸಿಗುತ್ತಿಲ್ಲ. 12 ತಿಂಗಳು ವೇತನ ನೀಡಬೇಕು. ಸದ್ಯ ಕೇವಲ 10 ರಿಂದ 12 ಸಾವಿರ ರೂ ಮಾತ್ರ ವೇತನ ನೀಡಲಾಗುತ್ತಿದೆ. ಕಳೆದ 5 ತಿಂಗಳಿನಿಂದ ವೇತನವನ್ನೇ ನೀಡಿಲ್ಲ. ಅವರಿಗೂ ಹೆಂಡತಿ, ಮಕ್ಕಳಿದ್ದಾರೆ ಅನ್ನೋದನ್ನು ಗಮನಿಸಬೇಕು. ಕೆಲವರು ಕೆಲಸವಿಲ್ಲದೇ ಈಗ ತರಕಾರಿ ಮಾರಾಟ ಮಾಡುತ್ತಿದ್ದಾರೆ ಎಂದರು.
ಈ ಹಿಂದೆ 5 ಸಾವಿರ ರೂ ಹೆಚ್ಚಿನ ವೇತನ ನೀಡುತ್ತೇವೆ ಎಂದು ಸರ್ಕಾರ ಹೇಳಿತ್ತು. ಆದರೆ ಸರಿಯಾಗಿ ಇರುವ ವೇತನವನ್ನೇ ನೀಡುತ್ತಿಲ್ಲ. ಕೂಡಲೇ ಎಲ್ಲಾ ಅತಿಥಿ ಉಪನ್ಯಾಸಕರ ವೇತನ ಬಿಡುಗಡೆ ಮಾಡಿ, ಸರ್ಕಾರ ಅವರ ನೆರವಿಗೆ ಬರಬೇಕು. ಆ. 27 ರಂದು ನಗರದ ಗಾಂಧಿ ಪ್ರತಿಮೆಯ ಬಳಿ ಈ ಹಿನ್ನೆಲೆಯಲ್ಲಿ ಹೋರಾಟ ಮಾಡಲಿದ್ದೇವೆ ಎಂದು ತಿಳಿಸಿದರು.