ಡಿಸಿ ಹಾಡಿಗೆ ಕುಣಿದು ಕುಪ್ಪಳಿಸಿದ ಸರ್ಕಾರಿ ಅಧಿಕಾರಿಗಳು ಚಿಕ್ಕಮಗಳೂರು:ಹೊಸ ಬೆಳಕು ಮೂಡುತಿದೆ.. ಡಾ. ರಾಜ್ ಕುಮಾರ್ ಅವರ ಹಾಡನ್ನು ಹಾಡುವುದರ ಮೂಲಕ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ ಎನ್ ರಮೇಶ್ ತಮ್ಮ ನೌಕರರನ್ನು ಮನರಂಜಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ, ತರೀಕೆರೆ ತಾಲೂಕಿನಲ್ಲಿ ನಿನ್ನೆ ಸರ್ಕಾರಿ ನೌಕರರ ಕ್ರೀಡಾಕೂಟದ ಸಮಾರೋಪ ಸಮಾರಂಭ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಕೆ ಎನ್ ರಮೇಶ್ ವೇದಿಕೆಗೆ ತೆರಳಿ ಡಾ.ರಾಜ್ ಕುಮಾರ್ ಅಭಿನಯದ ಹೊಸ ಬೆಳಕು ಚಿತ್ರದ ಹಾಡನ್ನು ಹಾಡಿದ್ದಾರೆ. ಜಿಲ್ಲಾಧಿಕಾರಿ ಹಾಡುತಿದ್ದಂತೆ ಸರ್ಕಾರಿ ನೌಕರರು, ವೇದಿಕೆ ಮೇಲೆ ಬಂದು ಕುಣಿದು ಕುಪ್ಪಳಿಸಿದ್ದಾರೆ.
ಕೆಲಸದ ಒತ್ತಡದ ಮಧ್ಯೆಯೂ ಡ್ಯಾನ್ಸ್ ಮಾಡಿ ನೌಕರರು ಸಂತಸ ಹಂಚಿಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲಾಧಿಕಾರಿ ರಮೇಶ್ ಹಾಡಿದ ಹಾಡಿಗೆ ತಹಶೀಲ್ದಾರ್ ಸೇರಿದಂತೆ ಎಲ್ಲಾ ಅಧಿಕಾರಿಗಳು, ನೌಕರರು ಟಪ್ಪಾಂ ಗುಚ್ಚಿ ಸ್ಟೆಪ್ಸ್ ಹಾಕಿ ಕುಣಿದು ಕುಪ್ಪಳಿಸಿದ್ದಾರೆ. ಪ್ರತಿಯೊಬ್ಬ ನೌಕರರು ಪುರುಷರು ಮಹಿಳೆಯರು ಎನ್ನದೇ ತಮ್ಮ ಒತ್ತಡದ ಕೆಲಸ ಮರೆತು ಕುಣಿದು ಕುಪ್ಪಳಿಸಿದ್ದು ತುಂಬಾ ವಿಶೇಷವಾಗಿತ್ತು.
ಅದೇ ರೀತಿ ತಮ್ಮ ನೌಕರರನ್ನು ಡಾ. ರಾಜ್ ಕುಮಾರ್ ಅವರ ಹಾಡು ಹಾಡುವುದರ ಮೂಲಕ ಜಿಲ್ಲಾಧಿಕಾರಿ ಕೆ ಎನ್ ರಮೇಶ್ ರಂಜಿಸಿದ್ದಕ್ಕೆ ಪ್ರತಿಯೊಬ್ಬ ನೌಕರರು ಆಶ್ಚರ್ಯ ಚಕಿತರಾದರು.
ಇದನ್ನೂ ಓದಿ:ಹಾಡು ಹಾಡಿ ನೃತ್ಯ ಮಾಡಿ ಗಮನ ಸೆಳೆದ ಜಿಲ್ಲಾಧಿಕಾರಿ!